ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎಂ.ಕೇಶವರೆಡ್ಡಿಯವರು ಇತರ ಜಿ.ಪಂ ಸದಸ್ಯರೊಂದಿಗೆ ಸೌಜನ್ಯವಾಗಿ ವರ್ತಿಸುವುದು ಸೇರಿದಂತೆ ಗೌರವಿಸುವುದನ್ನು ಮೊದಲು ರೂಡಿಸಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ (ಮುನಯ್ಯ) ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಅ ೨೧ ರಂದು ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಫುರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ರಾಜಾಕಾಂತ್ ಮಾತನಾಡಿ ಜಿಲ್ಲೆಯಾದ್ಯಂತ ಎಸ್ ಸಿ ಪಿ ಹಾಗೂ ಟಿ ಎಸ್ ಪಿ ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದೆ. ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಯಾವುದೇ ಅಧಿಕಾರಿಗಳು ಭಾಗವಹಿಸಲ್ಲ ಎಂದು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಅಧ್ಯಕ್ಷರು ಗ್ರಾಮ ಸಭೆಗೆ ಯಾವುದೇ ಅಧಿಕಾರಿ ಭಾಗವಹಿಸಬೇಕಾಗಿಲ್ಲ, ಬದಲಿಗೆ ನನಗೆ ನಲವತ್ತು ವರ್ಷಗಳ ರಾಜಕೀಯ ಅನುಭವವಿದೆ, ಇಷ್ಟವಿದ್ದರೆ ಸಭೆಯಲ್ಲಿರಿ, ಇಲ್ಲವಾದಲ್ಲಿ ಸಭೆಯಿಂದ ಹೊರನಡೆಯಿರಿ ಎಂದು ಹೇಳುವ ಮೂಲಕ ದರ್ಪ ಪ್ರದರ್ಶಿಸಿ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ.
ಒಬ್ಬ ಜಿಲ್ಲಾ ಪಂಚಾಯತಿ ಸದಸ್ಯರನ್ನು ಏರುಧ್ವನಿಯಲ್ಲಿ ಮಾತನಾಡುವುದು ಸೇರಿದಂತೆ ಸಭೆಯಿಂದ ಹೊರನಡೆಯಿರಿ ಎನ್ನುವ ಮೂಲಕ ದರ್ಪ ಪ್ರದರ್ಶಿಸುವ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಯಾವುದೇ ಸಭೆ, ಸಮಾರಂಭಗಳನ್ನು ನಡೆಸಲು ಬಿಡುವುದಿಲ್ಲ ಎಂದರು.
ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ, ಕೆ.ಸಿ.ರಾಜಾಕಾಂತ್ ರವರು ದಲಿತ ಸಂಘರ್ಷ ಸಮಿತಿಯಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ತಮ್ಮಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ಆಶೀರ್ವಾದದಿಂದ ಗೆದ್ದು ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ. ಕನಿಷ್ಠ ಜಿಲ್ಲಾ ಪಂಚಾಯತಿ ಸದಸ್ಯ ಎಂಬುದಕ್ಕಾದರೂ ಗೌರವಿಸದೆ ಕೇವಲ ರಾಜಕೀಯ ದುರುದ್ದೇಶದಿಂದ ಓರ್ವ ದಲಿತ ಮುಖಂಡ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಮಾತನಾಡುವುದು ಸೇರಿದಂತೆ ಧರ್ಪ ಪ್ರದರ್ಶಿಸುವುದನ್ನು ಕೂಡಲೇ ಬಿಡಬೇಕು. ಜಿಲ್ಲೆಯಾಧ್ಯಂತ ಎಸ್ಸಿಪಿ ಹಾಗು ಟಿಎಸ್ಪಿ ಯೋಜನೆಯಡಿ ನಡೆದಿರುವ ಅವ್ಯವಹಾರದ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ತಮ್ಮ ವಿರುದ್ದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ದಸಂಸ ಪದಾಧಿಕಾರಿಗಳಾದ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮಿನಾರಾಯಣ, ಜೆ.ಎಂ.ವೆಂಕಟೇಶ್, ದೊಡ್ಡತಿರುಮಲಯ್ಯ, ಅನಿಲ್, ಮುನಿಕೃಷ್ಣಪ್ಪ, ಮಂಜುನಾಥ್ ಮತ್ತಿತರರು ಹಾಜರಿದ್ದರು.