Home News ಜಿಲ್ಲಾ ಯುವ ಜನ ಸಮಾವೇಶ

ಜಿಲ್ಲಾ ಯುವ ಜನ ಸಮಾವೇಶ

0

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸರ್ವೋದಯ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ಯುವ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಜನ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಮಾತನಾಡಿದರು.
ಇಂದಿನ ಯುವಜನತೆ ಸಾಮಾಜಿಕ ಬದ್ಧತೆಯುಳ್ಳ ಗುರಿಯನ್ನು ಹಾಕಿಕೊಂಡು ಗುರಿಯತ್ತ ನಡೆದಾಗ ಸದೃಡ ಭಾರತವನ್ನು ಕಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಯುವ ಜನತೆ ಹೆಚ್ಚಾಗಿದ್ದಾರೆ. ಯುವಜನತೆ ಮೇಲೆ ಜವಾಬ್ದಾರಿ ಸಹ ಹೆಚ್ಚಾಗಿದೆ. ಅವರಿಗೆ ತರಬೇತಿ ನೀಡುವ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡುವುದು ನೆಹರೂ ಯುವ ಕೇಂದ್ರದ ಉದ್ದೇಶವಾಗಿದೆ. ಮೊದಲು ಯುವಕರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು, ತಂದೆ ತಾಯಿಗಳಿಗೆ, ಹಿರಿಯರಿಗೆ ಗೌರವ ನೀಡಬೇಕು. ವಯೋವೃದ್ದರಿಗೆ, ಅಂಗವಿಲರಿಗೆ, ಹಿರಿಯರಿಗೆ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು, ಆತ್ಮವಿಶ್ವಾಸವುಳ್ಳ ೧೦೦ ಜನ ಯುವಕರನ್ನು ನನಗೆ ಕೊಡಿ ದೇಶವನ್ನು ಬದಲಾಯಿಸಿ ನೋಡಿಸುತ್ತೇನೆ ಎಂದು ಹೇಳಿದ್ದ ಮಾತಿನ ಉದ್ದೇಶವನ್ನು ಅರಿಯಬೇಕಿದೆ. ಸ್ವಾಮಿ ವಿವೇಕಾನಂದರ ಸಾಧನೆ, ಬೋಧನೆಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಂಡಲ್ಲಿ ದೇಶದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ೨೦೧೭-೧೮ನೇ ಸಾಲಿನ ಸಾಮಾಜಿಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಕೃತಿ ಕ್ರೀಡಾ ಮತ್ತು ಸಾಂಸೃತಿಕ ಕಲಾ ಸಂಸ್ಥೆ ಮಾರ್ಜೆನಹಳ್ಳಿಯ ಮುನಿಸ್ವಾಮಿ ಅವರಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಯುವ ಸಂಘ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ೨೫ ಸಾವಿರ ರೂ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
ಪ್ರಕೃತಿ ಕ್ರೀಡಾ ಮತ್ತು ಸಾಂಸೃತಿಕ ಕಲಾ ಸಂಸ್ಥೆ ಮಾರ್ಜೆನಹಳ್ಳಿಯ ಮುನಿಸ್ವಾಮಿ, ಜೈ ಭುವನೇಶ್ವರಿ ಕಲಾ ಸಂಸ್ಥೆಯ ಮಾಲೂರು ಎಂ.ಎಲ್.ರವಿ, ಕನ್ನಡ ಯುವಶಕ್ತಿ ಸಂಘದ ಕೋಲಾರ ಮಾನಸ್ ಇವರುಗಳಿಗೆ ಮೇ ೨೦೧೮ ರಿಂದ ಜುಲೈ ೨೦೧೮ನೇ ಸ್ವಚ್ಛ ಬೇಸಿಗೆ ಪ್ರಯೋಜಿಕ ಕಾರ್ಯಕ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂರು ತಂಡಗಳೆಂದು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಗೌಸಿಯಾ ಯುವಕ ಸಂಘ ಮಾರ್ಜೆನಹಳ್ಳಿ, ಸ್ಪಂದನ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ, ಉಜ್ವಲ ಗ್ರಾಮೀಣಾವೃದ್ಧಿ ಸಂಸ್ಥೆ ಗುಡಿಬಂಡೆ, ಸ್ವಾಮಿ ವಿವೇಕಾನಂದ ಯುವ ಸಂಸ್ಥೆ ಶಿಡ್ಲಘಟ್ಟ ಇವರಿಗೆ ಕ್ರೀಡಾ ಸಮಾಗ್ರಿಗಳನ್ನು ವಿತರಿಸಲಾಯಿತು.
ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಉಪನ್ಯಾಸಕ ಮಂಜುನಾಥ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರನಾಯಕ್, ಶ್ರೀಹರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪಿ.ಶ್ರೀಕಾಂತ್, ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ತಾಲ್ಲೂಕು ಅಧ್ಯಕ್ಷೆ ಜಿ.ವಿ.ಗಾಯಿತ್ರಿ, ಕಾರ್ಯದರ್ಶಿ ಕೆ.ನರೇಶ್‌ಕುಮಾರ್, ಪ್ರವೀಣ್, ಗಣೇಶ್, ಸತೀಶ್, ಅಬ್ಲೂಡು ಗಿರೀಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.