ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಮತ ಎಣಿಕೆಯ ಸಂದರ್ಭದಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ನಡೆಯಿತು.
ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಮತ ಎಣಿಕೆ ನಡೆದು ಕಾಂಗ್ರೆಸ್ ಪಕ್ಷದ ಪಿ.ನಿರ್ಮಲಾ ಮುನಿರಾಜು ವಿಜೇತರೆಂದು ಘೋಷಿಸಿದಾಗ ಅತ್ಯಂತ ಕಡಿಮೆ ಅಂತರವಿದ್ದುದರಿಂದ ಜೆಡಿಎಸ್ ಕಾರ್ಯಕರ್ತರು ಮರು ಎಣಿಕೆಗೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಎಣಿಕೆ ಸರಿಯಾಗಿ ನಡೆದಿದೆ, ನಮಗೆ ಪ್ರಮಾಣಪತ್ರ ನೀಡಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಈ ವಿಷಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಮೀರುವಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ, ಏಜೆಂಟರ ಸಮ್ಮುಖದಲ್ಲಿ ಮರುಎಣಿಕೆ ನಡೆಸಿದರು. ಮರುಎಣಿಕೆಯಲ್ಲಿಯೂ ಅಷ್ಟೇ ಮತಗಳು ಬಂದು ಕಾಂಗ್ರೆಸ್ ಪಕ್ಷದ ಪಿ.ನಿರ್ಮಲಾ ಮುನಿರಾಜು ಗೆಲುವನ್ನು ಸಾಧಿಸಿರುವರೆಂದು ಘೋಷಿಸಲಾಯಿತು.
ಅಬ್ಲೂಡು ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಂ.ಶ್ರೀನಿವಾಸ 7 ಮತಗಳ ಅಂತರದಿಂದ ಗೆಲುವು ಸಾಧಿಸಿರುವರೆಂದು ಘೋಷಿಸಿದಾಗ ಮರು ಎಣಿಕೆಗೆ ಜೆಡಿಎಸ್ ಕಾರ್ಯಕರ್ತರು ಮನವಿ ನೀಡಿದರು. ಮರುಎಣಿಕೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಂ.ಶ್ರೀನಿವಾಸ ಅಷ್ಟೇ ಮತಗಳನ್ನು ಪಡೆದು ಗೆಲುವು ಸಾಧಿಸಿರುವರೆಂದು ಘೋಷಿಸಲಾಯಿತು.