Home News ಜೈನಧರ್ಮ ತ್ಯಾಗ, ವೈರಾಗ್ಯ, ತಪಸ್ಸಿಗೆ ಮಹತ್ವ ನೀಡಿದೆ

ಜೈನಧರ್ಮ ತ್ಯಾಗ, ವೈರಾಗ್ಯ, ತಪಸ್ಸಿಗೆ ಮಹತ್ವ ನೀಡಿದೆ

0

‘ಅಹಿಂಸಾ ಪರಮೋ ಧರ್ಮಃ’ – ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ- ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತೀರ್ಥಂಕರರ ಜನ್ಮ-ಕರ್ಮಗಳು ದಿವ್ಯ, ಅಭೂತಪೂರ್ವ. ಅವರ ಸಾಧನೆಗಳು ಸಾಧಾರಣ ಮಾನವನ ಕಲ್ಪನೆಯನ್ನೂ ಮೀರಿದವು. ಮಹಾವೀರರು ತಮ್ಮ ಜೀವನದ ಪ್ರಥಮಭಾಗವನ್ನು ಅತ್ಯಂತ ಕಠೋರ ತಪಸ್ಸಿನಲ್ಲಿ ಕಳೆದು, ಕಡೆಯ ಮೂವತ್ತು ವರ್ಷಗಳನ್ನು ಜೀವಿಗಳ ಉದ್ಧಾರಕ್ಕಾಗಿ ಮುಡಿಪಿಟ್ಟರು. ಶ್ರದ್ಧಾಸಂಪನ್ನರೂ ಸಾಧನಾಪ್ರಿಯರೂ ಆದ ಅನೇಕ ಶಿಷ್ಯರ ಜೀವನಗಳನ್ನು ಕಮಲದ ಹೂವಿನಂತೆ ಅರಳಿಸಿದರು ಎಂದು ವಿವರಿಸಿದರು.
ಪುರಠಾಣೆ ಸಬ್‌ಇನ್ಸ್‌ಪೆಕ್ಟರ್‌ ನವೀನ್ ರೆಡ್ಡಿ ಮಾತನಾಡಿ, ಸಮಾಜವನ್ನು ಶಾಂತಿಯೆಡೆಗೆ ಕರೆದೊಯ್ದವರು ಜೈನ ಮುನಿಗಳು. ಇವರಲ್ಲಿ 23 ತೀರ್ಥಂಕರರು. ಇವರಲ್ಲಿ ಮಹಾವೀರರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದು, ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಜೈನ ಧರ್ಮ ಭಾರತದಲ್ಲಿ ಉಗಮಿಸಿದ ಒಂದು ಧರ್ಮ. ಜೈನ ಎಂದರೆ ‘ಜಿನ’ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ’ ಗೆದ್ದವನು’ ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ ಜೀವರಿಗೆ ‘ಜಿನರು’ ಎಂದು ಹೆಸರು. ಜಿನರಿಂದ ಉಪದೇಶಿಸಲ್ಪಟ್ಟ ಧರ್ಮವೇ ಜೈನಧರ್ಮ. ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲಸೂತ್ರಗಳು ಎಂದು ಹೇಳಿದರು.
ಮಾಜಿ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಗುರುರಾಜರಾವ್‌, ಸರ್ಕಾರಿ ಅಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜದ್ದರು.

error: Content is protected !!