Home News ಡಾ.ಬಿ.ಆರ್‌. ಅಂಬೇಡ್ಕರ್‌ ಒಂದು ವರ್ಗಕ್ಕೆ ಸೇರಿದವರಲ್ಲ

ಡಾ.ಬಿ.ಆರ್‌. ಅಂಬೇಡ್ಕರ್‌ ಒಂದು ವರ್ಗಕ್ಕೆ ಸೇರಿದವರಲ್ಲ

0

ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಎಲ್ಲ ಜನಾಂಗದ ಬಡವರ ಬಗ್ಗೆ ಕಾಳಜಿ ವಹಿಸಿದ್ದರು. ಅವರು ಕೇವಲ ಒಂದು ವರ್ಗಕ್ಕೆ ಸೇರಿದವರಲ್ಲ. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಪ್ರತಿಪಾದಿಸಿದವರು ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಘಟನಾ ಸಂಚಾಲಕ ಟಿ.ಎ.ಛಲಪತಿ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 60ನೇ ವರ್ಷದ ಪರಿನಿರ್ವಾಹಣ ದಿನದ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ ರೋಗಿಗಳಿಗೆ ಹಣ್ಣು, ಬ್ರೆಡ್‌ ವಿತರಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್‌ ಮೊಟ್ಟಮೊದಲ ಬಾರಿಗೆ ಮಹಿಳೆಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ವಾದ ಮಂಡನೆ ಮಾಡಿದ್ದರು. ಈಗ ಮಹಿಳೆಯರು ಮುಖ್ಯವಾಹಿನಿಗೆ ಬರಲು ಮೂಲ ಕಾರಣ ಡಾ.ಅಂಬೇಡ್ಕರ್‌. ಅವರ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದು ಹೇಳಿದರು.
ದಲಿತ ಮುಖಂಡ ಕೆ.ಎಸ್‌.ದ್ಯಾವಕೃಷ್ಣಪ್ಪ ಮಾತನಾಡಿ, ಡಾ.ಅಂಬೇಡ್ಕರ್‌ ಅವರ ಸಿದ್ಧಾಂತದಂತೆ ಬಡವರ ಪರವಾಗಿ, ಅವರ ಏಳಿಗೆಗಾಗಿ ಕೆಲಸ ಮಾಡುವ ಉದ್ದೇಶದಿಂದ ಈ ದಿನ ದ.ಸಂ.ಸ ತಾಲ್ಲೂಕು ಘಟಕದ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದೆವು ಎಂದರು.
ಸರ್ಕಲ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್‌, ಸಬ್‌ಇನ್ಸ್‌ಪೆಕ್ಟರುಗಳಾದ ಪ್ರದೀಪ್‌ ಪೂಜಾರಿ, ನವೀನ್‌ರೆಡ್ಡಿ, ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ಡಾ.ಸುನೀತಾ, ಡಾ.ತಿಮ್ಮೇಗೌಡ. ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಟಿ.ವಿ.ಮುನಿಯಪ್ಪ, ಹುಜಗೂರು ವೆಂಕಟೇಶ್‌, ಟಿ.ಎಂ.ವೆಂಕಟೇಶ್‌, ದೊಡ್ಡ ತಿರುಮಳಯ್ಯ, ಲಕ್ಷ್ಮಣ, ನಾರಾಯಣಪ್ಪ ಮತ್ತಿತರರು ಹಾಜರಿದ್ದರು.

error: Content is protected !!