Home News ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ಅಧಿಕಾರಿಗಳು

ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ಅಧಿಕಾರಿಗಳು

0

ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇಲಾಖೆಗಳ ಅಧಿಕಾರಿಗಳು ನಗರದ ವಿವಿದೆಡೆ ಹತ್ತಿರದ ಅಂಗಡಿ, ಹೋಟೆಲುಗಳಿಗೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿರುವವರಿಗೆ ತಂಬಾಕು ನಿಯಂತ್ರಣ ಕಾನೂನಿನನ್ವಯ ಗುರುವಾರ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಮೇಲ್ವಿಚಾರಕ ಲೋಕೇಶ್ ಹಾಗೂ ತಂಡ ಪೊಲೀಸರ ಜೊತೆಯಲ್ಲಿದ್ದು, ರೈಲ್ವೆ ನಿಲ್ದಾಣ, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ತಾಲ್ಲೂಕು ಕಚೇರಿ ಹಾಗೂ ವಿವಿಧ ಶಾಲೆಗಳ ಹತ್ತಿರದ ಅಂಗಡಿಗಳು, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಹೋಗಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಂಡು ತಿಳುವಳಿಕೆ ನೀಡಿದ್ದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಲೋಕೇಶ್ ಮಾತನಾಡಿ, “ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುತ್ತಾ ಸಾರ್ವಜನಿಕವಾಗಿ ಬೀಡಿ ಸಿಗರೇಟ್ ಸೇದುವವರಿಗೆ ಸಣ್ಣ ಪ್ರಮಾಣದ ದಂಡ ವಿಧಿಸಿದೆವು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ 100 ಯಾರ್ಡ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ. ಇಂದು ಸುಮಾರು ಹತ್ತು ಮಂದಿಗೆ ದಂಡ ವಿಧಿಸಿದ್ದೇವೆ’ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಉನ್ನತಾಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯಡಿ ತಾಲ್ಲೂಕಿನೆಲ್ಲೆಡೆ ದಿಡೀರ್ ಭೇಟಿ ನೀಡಿ ದಂಡ ವಿಧಿಸುವ ಕಾರ್ಯಯೋಜನೆಯಿದೆ. ಸಾರ್ವಜನಿಕರಿಗೆ ಹಾಗೂ ಅಂಗಡಿಗಳವರಿಗೆ ಈಗಾಗಲೇ ಕಾನೂನಿನ ಅರಿವು ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಆರೋಗ್ಯ ಇಲಾಖೆಯ ಧನಂಜಯ, ಕೀರ್ತಿ, ಪೊಲೀಸ್ ಪೇದೆ ಶಶಿಕುಮಾರ್ ಹಾಜರಿದ್ದರು.

error: Content is protected !!