Home News ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ತಹಶೀಲ್ದಾರ್‌

ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ತಹಶೀಲ್ದಾರ್‌

0

ತಹಶೀಲ್ದಾರ್‌ ಅಜಿತ್‌ರೈ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಶಾಲಾ ಕಾಲೇಜುಗಳ ಹತ್ತಿರದ ಅಂಗಡಿ, ಹೋಟೆಲುಗಳಿಗೆ ಧಿಡೀರ್‌ ಭೇಟಿ ನೀಡಿ ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ತಂಬಾಕು ನಿಯಂತ್ರಣ ಕಾನೂನಿನನ್ವಯ ಮಂಗಳವಾರ ದಂಡ ವಿಧಿಸಿದರು.
ಸಬ್‌ಇನ್ಸ್‌ಪೆಕ್ಟರ್‌ ನವೀನ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ವಿವಿಧ ಶಾಲೆಗಳ ಹತ್ತಿರದ ಅಂಗಡಿಗಳು, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಹೋಗಿ ತಂಬಾಕು ಉ್ಪನ್ನಗಳ ಮಾರಾಟವನ್ನು ಕಂಡು ತಿಳುವಳಿಕೆ ನೀಡಿ ದಂಡ ವಿಧಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೂ ದಂಡ ವಿಧಿಸಿದರು.

ಶಿಡ್ಲಘಟ್ಟದಲ್ಲಿ ಮಂಗಳವಾರ ತಹಶೀಲ್ದಾರ್‌ ಅಜಿತ್‌ರೈ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಉರ್ದು ಕಿರಿಯ ಪ್ರಾಥಮಿ ಶಾಲೆಯಲ್ಲಿ ಪರಿಶೀಲನೆ ನಡೆಸಿದರು

ಪ್ರಾಂಶುಪಾಲರಿಗೂ ದಂಡ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಾನಾಯಕ್‌ ನಾಮಫಲಕವನ್ನು ಹಾಕಿಸದೆ ಇದ್ದುದಕ್ಕೆ ಅವರಿಗೂ ಒಂದು ನೂರು ರೂ ದಂಡ ವಿಧಿಸಿದರು. ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದುದು, ಮುಖ್ಯ ಶಿಕ್ಷಕರ ಗೈರು ಹಾಜರಿಯನ್ನು ಪ್ರಶ್ನಿಸಿದ ಅಧಿಕಾರಿಗಳು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಥಮ ದರ್ಜೆ ಕಾಲೇಜಿನ ಮುಂಭಾದಲ್ಲಿದ್ದ ತ್ಯಾಜ್ಯವನ್ನು ಶುಚಿಗೊಳಿಸದ ನಗರಸಭೆಯ ಅಧಿಕಾರಿಗಳ ಕಾರ್ಯವೈಫಲ್ಯಕ್ಕೆ ತಹಶೀಲ್ದಾರ್‌ ಬೇಸರ ವ್ಯಕ್ತಪಡಿಸಿದರು.
ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ರಾಜ್ಯ ಸಂಯೋಜಕ ಡಾ.ಹನುಮಂತರಾಜು ಈ ಸಂದರ್ಭದಲ್ಲಿ ಮಾತನಾಡಿ, ‘ಈ ದಿನ ತಹಶೀಲ್ದಾರ್‌ ನೇತೃತ್ವದಲ್ಲಿ ಶಾಲಾ ಕಾಲೇಜುಗಳ ಆಸುಪಾಸಿನ ವ್ಯಾಪಾರಸ್ಥರಿಗೆ ಸಣ್ಣ ಪ್ರಮಾಣದ ದಂಡ ವಿಧಿಸುವ ಮೂಲಕ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದೆವು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ 100 ಯಾರ್ಡ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ’ ಎಂದು ತಿಳಿಸಿದರು.
ಅಧಿಕಾರಿಗಳಾದ ಶ್ರೀನಾಥ್‌ಗೌಡ, ಅನುಸೂಯಮ್ಮ, ದಿಲೀಪ್‌, ವಿಜಯಲಕ್ಷ್ಮಿ ಹಾಜರಿದ್ದರು.

error: Content is protected !!