‘ಮತದಾರರ ಮಿಂಚಿನ ನೋಂದಣಿ ಅಭಿಯಾನ’ದ ಪ್ರಯುಕ್ತ ಭಾನುವಾರ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಬಗ್ಗೆ ಅರಿವು ಮೂಡಿಸಿದರು.
‘ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಏಪ್ರಿಲ್ 14 ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಅಂಗವಿಕಲರು, ಮಹಿಳೆಯರು, ದುರ್ಬಲ ವರ್ಗದವರು ಸೇರಿದಂತೆ ಎಲ್ಲ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ನೋಂದಣಿ ಅಭಿಯಾನವು ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಶೇಕಡಾ 100 ರಷ್ಟು ಮತದಾನ ನಡೆಯಲು ಸಹಕರಿಸಬೇಕು’ ಎಂದು ತಹಶೀಲ್ದಾರ್ ಅಜಿತ್‌ಕುಮಾರ್ ರೈ ತಿಳಿಸಿದರು.
ಜಾಥಾ ನಡೆಸಿ ಅಂಗಡಿ ಮುಂಗಟ್ಟುಗಳ ಬಳಿ ತೆರಳಿ, ಕೂಲಿ ಕಾರ್ಮಿಕರು, ಮಹಿಳೆಯರು, ಯುವಕರು ಮುಂತಾದವರಿಗೆ ಕರಪತ್ರವನ್ನು ನೀಡಿ ಮತದಾನದ ಮಹತ್ವ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಗತ್ಯವಿರುವ ದಾಖಲೆಗಳು ಮುಂತಾದವುಗಳ ಬಗ್ಗೆ ವಿವರಿಸಿದರು.
ಚುನಾವಣಾಧಿಕಾರಿ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಹಾಜರಿದ್ದರು.