ಚಳಿಗಾಲ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಆಗಲೇ ತಾಲ್ಲೂಕಿನ ಹಲವೆಡೆ ಜಾನುವಾರುಗಳ ಮೇವಿನ ಕೊರತೆಯಂಟಾಗಿದ್ದು, ಹೈನುಗಾರಿಕೆಯನ್ನು ಅವಲಂಬಿಸಿರುವವರು ಮೇವಿನ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.
ಮಳೆಯ ಕೊರತೆಯಿಂದಾಗಿ ರಾಗಿ ಬೆಳೆ ತಾಲ್ಲೂಕಿನಲ್ಲಿ ಕಡಿಮೆಯಾಗಿತ್ತು. ಬಹಳಷ್ಟು ಕಡೆ ಹೊಲ ತೆಳುವಾಗಿತ್ತು. ಕೂಲಿಯಾಳುಗಳ ಹಣ, ಸಮಯವನ್ನು ಉಳಿಸಲು ಕೆಲವರು ಯಂತ್ರದಿಂದ ಹೊಲದಲ್ಲಿದ್ದ ರಾಗಿ ಕೊಯ್ಲನ್ನು ನಡೆಸಿದ್ದರು. ಯಂತ್ರದಿಂದ ಕುಯ್ದ ನಂತರ ಉಳಿಕೆಯ ರಾಗಿ ದುಂಪೆಗಳಿಗೂ ಈಗ ಬೇಡಿಕೆ ಬಂದುಬಿಟ್ಟಿದೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈ ರೀತಿಯ ರಾಗಿ ದುಂಪೆಗಳನ್ನು ಮಹಿಳೆಯರು ಗುಂಪುಗುಂಪಾಗಿ ಬಂದು ರಾಗಿ ದುಂಪೆಗಳನ್ನು ಕತ್ತರಿಸಿಕೊಳ್ಳುತ್ತಾ, ಹೊಲದಲ್ಲಿ ಬಿದ್ದಿರುವ ಹುಲ್ಲನ್ನು ಸಹ ಬಾಚಿಕೊಳ್ಳುತ್ತಿದ್ದಾರೆ. ಮಹಿಳೆಯರು ತಮ್ಮ ಶಕ್ತ್ಯಾನುಸಾರ ಹುಲ್ಲಿನ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.
“ಇನ್ನೂ ಬೇಸಿಗೆ ಬಂದಿಲ್ಲ. ಈಗಾಗಲೇ ಮೇವಿಗೆ ಬೇಡಿಕೆ ಜಾಸ್ತಿಯಾಗಿದೆ. ಒಂದು ಲೋಡು ಒಣ ಮೇವು, ಹುಲ್ಲು, ಟ್ರಾಕ್ಟರ್ ಬಡಿಗೆ, ಕೂಲಿ ಎಲ್ಲಾ ಸೇರಿಸಿದರೆ ೧೮ ರಿಂದ ೨೦ ಸಾವಿರ ರೂಗಳಗುತ್ತಿದೆ. ಮುಂದೆ ತೊಂದರೆಯಾದೀತೆಂದು ಈಗಲೇ ಮೇವಿನ ಸಂಗ್ರಹಣೆಯಲ್ಲಿದ್ದೇವೆ” ಎನ್ನುತ್ತಾರೆ ರೈತ ಮುನಿರಾಜು.
“ನಮಗೆ ಜಮೀನಿಲ್ಲ, ಹಾಗಾಗಿ ಮೇವು ಬೆಳೆಯಲು ಆಗದು. ಮನೆಯಲ್ಲಿನ ಹಸುಗಳಿಗೆ ಮೇವು ಸಂಗ್ರಹಿಸಲು ರಾಗಿ ಹೊಲಗಳಿಗೆ ಬಂದಿದ್ದೇವೆ. ಯಂತ್ರದಿಂದ ಕತ್ತರಿಸಿ, ಮುಳ್ಳು ಕಂಬಿ ಎಳೆಸಿದ ನಂತರ ಉಳಿಕೆ ಹುಲ್ಲನ್ನು ಸಂಗ್ರಹಿಸುತ್ತಿದ್ದೇವೆ. ದುಂಪೆಗಳಲ್ಲಿ ಉಳಿಕೆಯನ್ನು ಬಿಡದೆ ಕುಡುಗೋಲಿನಿಂದ ಕತ್ತರಿಸಿಕೊಳ್ಳುತ್ತಿದ್ದೇವೆ” ಎಂದು ರತ್ನಮ್ಮ, ಮುನಿಯಮ್ಮ, ಶಾರದಮ್ಮ, ಮುನಿಅಕ್ಕಾಯಮ್ಮ, ಶಾಂತಮ್ಮ, ವೆಂಕಟಮ್ಮ ತಿಳಿಸಿದರು.