ಪ್ರಭಾವಿಗಳ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈಗೊಂಬೆಗಳಂತೆ ವರ್ತಿಸುತ್ತಿರುವ ನಗರದ ತಾಲ್ಲೂಕು ಕಚೇರಿ ಸಿಬ್ಬಂದಿ ಬಡಜನತೆ ಹಾಗೂ ರೈತರ ರಕ್ತ ಹೀರುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಆರೋಪಿಸಿದರು.
ತಾಲ್ಲೂಕು ಕಚೇರಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಪಡೆಯಲು ರೈತರಿಂದ ದುಪ್ಪಟ್ಟು ಹಣ ಪಡೆಯುತ್ತಿರುವ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅವರು ಮನವಿ ಸಲ್ಲಿಸಿ ಮಾತನಾಡಿದರು.
ನಗರದ ಮುದ್ದುರಾಜ್ ಎಂಬ ರೈತನಿಂದ ಇತ್ತೀಚೆಗೆ ಇಸಿ ಹಾಗೂ ಕ್ರಯಪತ್ರ ನೀಡಲು ದುಪ್ಪಟ್ಟು ಹಣ ಪಡೆದ ಸಿಬ್ಬಂದಿಯ ವಿರುದ್ದ ಅಗತ್ಯ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ತಾಲ್ಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ತಾಲ್ಲೂಕು ಕಚೇರಿಯ ಅಧಿಕಾರಿಗಳು ಕೇವಲ ಮಧ್ಯವರ್ತಿಗಳ ಕೆಲಸ ಕಾರ್ಯಗಳನ್ನಷ್ಟೇ ಮಾಡುವ ಮೂಲಕ ಕಚೇರಿಯ ತುಂಬಾ ಮಧ್ಯವರ್ತಿಗಳನ್ನು ಪೋಷಿಸಿಕೊಂಡಿದ್ದಾರೆ. ಕೂಡಲೇ ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದೂ ಹಾಗೂ ಯಾವ ಯಾವ ದಾಖಲೆಗೆ ಎಷ್ಟು ಹಣ ಸರ್ಕಾರಕ್ಕೆ ಪಾವತಿಸಬೇಕು ಎಂಬ ಫಲಕ ಅಳವಡಿಸಬೇಕು. ಕಡ್ಡಾಯವಾಗಿ ರೈತರಿಂದ ಮತ್ತು ನಾಗರಿಕರಿಂದ ಪಡೆದ ಹಣಕ್ಕೆ ಸೂಕ್ತ ರಸೀದಿ ನೀಡುವ ವ್ಯವಸ್ಥೆ ಮಾಡಬೇಕು. ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಉಪನೋಂದಣಾಧಿಕಾರಿ ಪ್ರಸಾದ್‌ಕುಮಾರ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಪ್ರತೀಶ್, ರೈತ ಮುಖಂಡ ಮುದ್ದುರಾಜ್ ಹಾಜರಿದ್ದರು.