ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರನ್ನು ಕಾರಣವಿಲ್ಲದೆ ಬದಲಾಯಿಸಿರುವ ಕಸಾಪ ಜಿಲ್ಲಾಧ್ಯಕ್ಷರ ಏಕಮುಖ ನಿರ್ಣಯವನ್ನು ಕಸಾಪ ಸದಸ್ಯರು ಮತ್ತು ಪದಾಧಿಕಾರಿಗಳು ಖಂಡಿಸಿದ್ದಾರೆ.
ಕಳೆದ ವರ್ಷ ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ತಾಲ್ಲೂಕು ಸದಸ್ಯರ ಅಭಿಪ್ರಾಯದ ಮೇರೆಗೆ ಬಿ.ಆರ್.ಅನಂತಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆದರೆ ಜಿಲ್ಲೆಯಲ್ಲಿ ಬೇರೆ ಯಾವ ತಾಲ್ಲೂಕಿನಲ್ಲೂ ಅಧ್ಯಕ್ಷರನ್ನು ಬದಲಿಸದೆ ಕೇವಲ ಶಿಡ್ಲಘಟ್ಟ ತಾಲ್ಲೂಕಿನ ಅಧ್ಯಕ್ಷರನ್ನು ಮಾತ್ರ ಬದಲಾಯಿಸಿರುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.
ತಾಲ್ಲೂಕು ಅಧ್ಯಕ್ಷರಾಗುವ ಮುನ್ನವೇ ಒಂಭತ್ತು ಅಂಶಗಳ ಕಾರ್ಯಯೋಜನೆಯನ್ನು ಹೊಂದಿದ್ದ ಬಿ.ಆರ್.ಅನಂತಕೃಷ್ಣ ಒಂದೇ ವರ್ಷದಲ್ಲಿ ಅವುಗಳನ್ನು ಪೂರೈಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಹರೀಶ್ ಆರ್.ಭಟ್ ಅವರನ್ನು ಕರೆಸಿ ವಿಜ್ಞಾನವನ್ನು ಕನ್ನಡದಲ್ಲಿ ಉಣಬಡಿಸುವ ಮೂಲಕ ಪದಗ್ರಹಣ ನಡೆಸಿದ ಅವರು, ಪರಿಸರ ದಿನಾಚರಣೆ, ದತ್ತಿ, ಪ್ರತಿಭಾ ಪುರಸ್ಕಾರ, ಕಸದಿಂದ ರಸ ಕಲಾ ಶಿಬಿರ, ಶಾಲೆಗೊಂದು ಕನ್ನಡ ಕಾರ್ಯಕ್ರಮ, ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ, ತಾಲ್ಲೂಕಿನ ೧೩೦ ಶಾಲೆಗಳ ಗ್ರಂಥಾಲಯಗಳಿಗೆ ‘ಪುಸ್ತಕ ಕೊಡುಗೆ’, ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂಬ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಇಸ್ರೋ ಜಿಯೋಸ್ಯಾಟ್ ವಿಜ್ಞಾನಿ ಹಿರಿಯಣ್ಣ, ವಿಜ್ಞಾನ ಲೇಖಕ ನಾಗೇಶ್ ಹೆಗಡೆ, ವಿಜ್ಆನಿ ಹರೀಶ್ ಆರ್.ಭಟ್ ಮೊದಲಾದ ಸಾಧಕರ ಪರಿಚಯ, ಕವಿಯ ನೆನೆದು ಕವಿತೆ ಕೇಳಿ ಕಾರ್ಯಕ್ರಮ, ಕವಿನಮನ, ಇನ್ಫೋಸಿಸ್ ನಾರಾಯಣಮೂರ್ತಿ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ನಡೆಸಿದರು. ಈ ಮೂಲಕ ಶಿಡ್ಲಘಟ್ಟ ತಾಲ್ಲೂಕು ಕಸಾಪ ಸುಮಾರು ೮,೦೦೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. ತಾಲ್ಲೂಕಿನಾದ್ಯಂತ ಗ್ರಾಮಗಳಲ್ಲಿ, ನೆರೆಯ ರಾಜ್ಯ ಹಾಗೂ ವಿದೇಶದಲ್ಲೂ ಶಿಡ್ಲಘಟ್ಟ ಕಸಾಪ ಕಾರ್ಯಕ್ರಮಗಳನ್ನು ನಡೆಸಿತು.
ನಿಸ್ವಾರ್ಥವಾಗಿ ಸ್ವಂತ ಹಣವನ್ನು ಖರ್ಚು ಮಾಡಿ ಯಾರ ಅವಧಿಯಲ್ಲೂ, ಜಿಲ್ಲೆಯ ಯಾವ ತಾಲ್ಲೂಕಿನಲ್ಲೂ ಆಗದಷ್ಟು ಕಾರ್ಯಕ್ರಮಗಳನ್ನು ಬಿ.ಆರ್.ಅನಂತಕೃಷ್ಣ ಅವರು ತಮ್ಮ ಅವಧಿಯಲ್ಲಿ ನಡೆಸಿದ್ದರೂ, ಅವರನ್ನು ಬದಲಾವಣೆ ಮಾಡಿರುವುದು ಹಲವು ಅನುಮಾನ ಹಾಗೂ ಗೊಂದಲವನ್ನು ಸೃಷ್ಟಿಸಿದೆ. ಈ ಬಗ್ಗೆ ಜಿಲ್ಲೆಯ ಸಾಹಿತ್ಯವಲಯದಲ್ಲಿ, ಕಸಾಪ ಸದಸ್ಯರಲ್ಲಿ ಹಾಗೂ ಸಾಹಿತ್ಯ ಪ್ರಿಯರಲ್ಲಿ ಅಸಮಧಾನ ವ್ಯಕ್ತವಾಗಿದೆ.
‘ಕನ್ನಡ ಸಾಹಿತ್ಯ ಪರಿಷತ್ತಿನ ಸಿದ್ದಾಂತಕ್ಕೆ ಬದ್ದನಾಗಿ ನಾನು ಮತ್ತು ನಮ್ಮ ಪದಾಧಿಕಾರಿಗಳು ಕನ್ನಡ ಸೇವೆಯನ್ನು ಮಾಡಿದ್ದೇವೆ. ಒಂದು ವರ್ಷದ ಅವಧಿಯಲ್ಲಿ 200ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಾಲ್ಲೂಕಿನ ಮೂಲೆ ಮೂಲೆಯನ್ನು ಹಾಗೂ ಸಮಸ್ತ ಕನ್ನಡ ಮನಸ್ಸುಗಳಿಗೂ ಕಸಾಪವನ್ನು ಹತ್ತಿರವಾಗಿಸಿದ್ದೇವೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್ ದೂರವಾಣಿ ಮೂಲಕ ಅಭಿನಂದಿಸಿದ್ದರು. ಉತ್ತಮ ಕಾರ್ಯ ನಿರ್ವಹಿಸಿದ್ದರೂ ಬದಲಾವಣೆ ಮಾಡಲಾಗಿದೆ. ಪ್ರಾಮಾಣಿಕವಾಗಿ ಕನ್ನಡದ ಸೇವೆ ಮಾಡುವವರಿಗೆ ಇಲ್ಲಿ ಬೆಲೆ ಇಲ್ಲವೆ’ ಎಂದು ಬಿ.ಆರ್.ಅನಂತಕೃಷ್ಣ ಪ್ರಶ್ನಿಸುತ್ತಾರೆ.
‘ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಅವರು ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದೇನೆ. ಉತ್ತಮವಾಗಿ ಸೇವೆ ಸಲ್ಲಿಸಿದರೆ ಮುಂದುವರೆಸುತ್ತೇನೆ, ಇಲ್ಲದಿದ್ದಲ್ಲಿ ಬೇರೆಯವರಿಗೆ ಅವಕಾಶ ನೀಡುತ್ತೇನೆ ಎಂದಿದ್ದರು. ಆದರೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದರೂ ಬದಲಿಸಿದ್ದಾರೆ. ಇದರ ಹಿಂದಿನ ಮರ್ಮವೇನು. ಬೇರೆ ತಾಲ್ಲೂಕುಗಳನ್ನು ಬಿಟ್ಟು ಕೇವಲ ಶಿಡ್ಲಘಟ್ಟದಲ್ಲಿ ಮಾತ್ರ ಬದಲಾಯಿಸಲು ಕಾರಣವೇನು. ರಾಜ್ಯ ದೇಶದ ಗಡಿದಾಟಿ ಕಾರ್ಯಕ್ರಮಗಳನ್ನು ಮಾಡಿ ಹೆಸರು ಮಾಡಿರುವುದು ಇವರ ಅಪಥ್ಯಕ್ಕೆ ಕಾರಣವೆ ಅರ್ಥವಾಗುತ್ತಿಲ್ಲ. ಕನಿಷ್ಟ ಕಸಾಪ ಸದಸ್ಯರ ಗಮನಕ್ಕೂ ತರದೆ ಬದಲಾವಣೆಯನ್ನು ಏಕಮುಖ ನಿರ್ಣಯವಾಗಿ ಕೈಗೊಳ್ಳಲಾಗಿದೆ’ ಎಂದು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜರಾವ್ ತಿಳಿಸಿದ್ದಾರೆ.
‘ಕನ್ನಡದ ಸೇವೆಗಿಂತ ಕಸಾಪ ಜಿಲ್ಲಾಧ್ಯಕ್ಷರ ಸೇವೆ ಮಾಡುವವರಿಗೆ ಅಧ್ಯಕ್ಷ ಗಾದಿ ಎಂದು ನಿರೂಪಿತವಾಗಿದೆ. ತಮ್ಮ ವಾಹನವನ್ನು ನೀಡಿ, ಚಾಲಕರಾಗಿ ಸೇವೆ ಮಾಡಿದವರಿಗೆ ಅಧ್ಯಕ್ಷ ಪದವಿಯನ್ನು ನೀಡುವ ಹೊಸ ಮಾನದಂಡವು ಈ ಬಾರಿ ಸೃಷ್ಟಿಯಾಗಿದೆ’ ಎಂದು ಮಾಜಿ ಕಸಾಪ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ ತಿಳಿಸಿದ್ದಾರೆ.
’ಉತ್ತಮ ಕೆಲಸ ಮಾಡಿದರೆ ಗೇಟ್ ಪಾಸ್. ಕೆಲಸ ಮಾಡದೆ, ನಿದ್ರೆ ಮಾಡುತ್ತಿದ್ದರೆ ಇರಿ ಎನ್ನುತ್ತಾರೆ, ಅದುವೇ ಜಿಲ್ಲಾ ಕಸಾಪ ಅಧ್ಯಕ್ಷರ ವೈಖರಿ. ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ ಅಧ್ಯಕ್ಷರಾದ ಬಿ.ಆರ್. ಅನಂತಕೃಷ್ಣ ರವರನ್ನ ಬದಲಾಯಿಸಲಾಗಿದೆ, ನಗರದಲ್ಲಿ ಅಲ್ಲದೆ ತಾಲ್ಲೂಕಿನಾದ್ಯಂತ ಹಳ್ಳಿ ಹಳ್ಳಿಗಳಿಗೆ ಹೋಗಿ ಕಾರ್ಯಕ್ರಮ ಮಾಡಿದ್ದಾರೆ. ಗ್ರಾಮದಲ್ಲಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಮಾಡಿರುವುದೇ ಅಲ್ಲದೆ ಅಲ್ಲಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ನೀಡಿದ್ದಾರೆ, ಪ್ರಮುಖ ಸಾಧಕರನ್ನು ಕರೆಯಿಸಿ ಕವಿಗಳ, ಸಾಹಿತಿಗಳ ಪರಿಚಯ ಮಾಡಿಸಿದ್ದಾರೆ. ಸ್ಪರ್ಧೆ ಏರ್ಪಡಿಸಿ ತಮ್ಮ ಸ್ವಂತ ಹಣದಿಂದ ಬಹುಮಾನ ನೀಡಿದ್ದಾರೆ, ಇವರ ಜೊತೆಗೆ, ತಿರುಪತಿಯಲ್ಲಿ, ಭೂತಾನ್ ದೇಶದಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಯಾರ ಕಾಲದಲ್ಲೂ ಆಗದ ಕನ್ನಡ ಕಾರ್ಯಕ್ರಮಗಳನ್ನ ಮಾಡಿ ದಾಖಲೆ ಮಡಿದ್ದಾರೆ. ಇದು ತಪ್ಪೇ? ಇವರನ್ನ ತೆಗೆಯಲು ಕಾರಣವಾದರೂ ಏನು? ಇಂತಹ ಕನ್ನಡ ಭಕ್ತರು, ಕಾರ್ಯಕರ್ತರೂ, ಕನ್ನಡ ಸಾಹಿತ್ಯ ಪರಿಷತ್ತಿಗೆ ವರವಲ್ಲವೇ? ಇವರನ್ನ ತೆಗೆದದ್ದು ಖಂಡನೀಯ, ಜಿಲ್ಲಾಧ್ಯಕ್ಷರ ನಡೆ ಸಮ್ಮತವಲ್ಲ’ ಎನ್ನುತ್ತಾರೆ ಸಾಹಿತಿ ಶಿವರಾಂ.