ನಗರದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜನೆ ಮಾಡಲಾಗಿದ್ದ 72 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ಮಾಡಿ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಪಿ.ಈ.ಕರಗಪ್ಪ ಮಾತನಾಡಿದರು.
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಇವರ ಸ್ಮರಣೆಯಿಂದ ಯುವ ಜನಾಂಗದಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕಾಗಿರುವುದು ಅನಿವಾರ್ಯವಾಗಿದೆ. ಸ್ವತಂತ್ರ ಭಾರತದ ಏಕತೆಗೆ ಧಕ್ಕೆಯುಂಟುಮಾಡುವ ಇನ್ನೊಂದು ಅಂಶವೆಂದರೆ ಸೈದ್ಧಾಂತಿಕ ಸಂಘರ್ಷ. ಇಲ್ಲಿ ಎಡ ಪಂಥೀಯರಿಗೆ ಬಲಪಂಥೀಯರು ಅಸ್ಪೃಶ್ಯರಾದರೆ ಬಲ ಪಂಥೀಯರಿಗೆ ಎಡಪಂಥೀಯರು ಅಸ್ಪೃಶ್ಯರು. ಹೀಗಾಗಿ ಕ್ಷುಲ್ಲಕ ಕಾರಣಗಳಿಗಾಗಿ ಸಂಘರ್ಷ ನಡೆಯುತ್ತಿರುತ್ತದೆ ಎಂದು ಅವರು ಹೇಳಿದರು.
ದೇಶಾದ್ಯಂತ ಅಸಂಖ್ಯಾತ ಮಹನೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಬಲಿದಾನ ನೀಡಿದ್ದಾರೆ. ಈ ಮಹನೀಯರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರು.
ರಾಷ್ಟ್ರೀಯ ಸಮಿತಿ ಸದಸ್ಯ ರೂಪಸಿ ರಮೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಸಮಾಜದೊಟ್ಟಿಗೆ ಉತ್ತಮ ಭಾಂಧವ್ಯ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ಹಿರಿಯ ಸದಸ್ಯ ಕೆ.ವಿ.ಮುನೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ಪವಿತ್ರ ಸಂವಿಧಾನವನ್ನು ಸುಡುವಂತಹ ಮನಸ್ಥಿತಿಗಳು ನಿರ್ಮಾಣವಾಗಿರುವುದು ಖಂಡನೀಯ, ತಂತ್ರಜ್ಞಾನಗಳು ಮುಂದುವರಿದಂತೆ ಸಂಕುಚಿತ ಮನಃಸ್ಥಿತಿ ವ್ಯಾಪಕಗೊಂಡು ಸವಾಲಾಗಿ ಪರಿಣಮಿಸುತ್ತಿದೆ. ಪರಸ್ಪರ ಸಂಬಂಧಗಳು ಮರೆಯಾಗಿ ಮಾನವೀಯತೆ ನಶಿಸಿ ರಾಕ್ಷಸೀಯ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ಪುಸ್ತಕಗಳನ್ನು ಓದುವ, ಸುತ್ತಲಿನ ಪರಿಸರ, ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಮಾನವನನ್ನು ಎತ್ತರಕ್ಕೇರಿಸುತ್ತದೆ. ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮೂಲ ತಳಹದಿ ಕುಸಿಯದಿರಲು ಇಂತಹ ವಿಶಾಲ ಮನಃಸ್ಥಿತಿ ಅಗತ್ಯವಿದೆ ಎಂದರು.
ಸರಸ್ವತಿ ಕಾನ್ವೆಂಟ್ ಶಾಲೆಯ ಮಕ್ಕಳು, ವಂದೇ ಮಾತರಂ ಗೀತೆಯನ್ನು ಹಾಡಿದರು. ಆಶಾಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳು ರಾಷ್ಟ್ರಗೀತೆ ಹಾಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎ.ಶಶಿಕುಮಾರ್, ಕಾರ್ಯದರ್ಶಿ ಎಂ.ಮುನಿನಾರಾಯಣ, ಖಜಾಂಚಿ ಡಿ.ಜಿ.ಮಲ್ಲಿಕಾರ್ಜುನ, ಸದಸ್ಯರಾದ ಎಂ.ಎ.ತಮೀಮ್ ಪಾಷ, ರಮೇಶ್, ಲೊಕೇಶ್, ನಾರಾಯಣಸ್ವಾಮಿ, ಮಿಥುನ್ ಕುಮಾರ್, ಸಹಾಯಕ ಮಂಜುನಾಥ್, ಇದ್ದರು.