ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪ್ರತಿಷ್ಠೆಯ ಸಂಗತಿಯಾಗಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆ ಹಲವು ತಿರುವುಗಳನ್ನು ಪಡೆದು ಕೊನೆಗೆ ಜೆಡಿಎಸ್‌ನ ಬಶೆಟ್ಟಹಳ್ಳಿ ಕ್ಷೇತ್ರದ ಬಿ.ವಿ.ನಾರಾಯಣಸ್ವಾಮಿ ಅಧ್ಯಕ್ಷರಾಗಿ ಮೇಲೂರು ಕ್ಷೇತ್ರದ ಮುನಿಯಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ತಾಲ್ಲೂಕು ಪಂಚಾಯಿತಿಯ ಹಿಂದಿನ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಎಚ್.ನರಸಿಂಹಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಿತು. ಜೆಡಿಎಸ್ ನ ಒಮ್ಮತದ ಅಭ್ಯರ್ಥಿಯಾಗಿ ಬಶೆಟ್ಟಹಳ್ಳಿಯ ಬಿ.ವಿ.ನಾರಾಯಣಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೇಲೂರು ಕ್ಷೇತ್ರದ ಮುನಿಯಪ್ಪ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಪಲಿಚೇರ್ಲು ಕ್ಷೇತ್ರದ ಸದಸ್ಯೆ ಮಂಜುಳಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದಿಬ್ಬೂರಹಳ್ಳಿ ಕ್ಷೇತ್ರದ ಸದಸ್ಯೆ ಶಂಕರಮ್ಮ ನಾಮಪತ್ರ ಸಲ್ಲಿಸಿದ್ದರು. ಎರಡೂ ಕಡೆಗಳಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು, ಕೈ ಎತ್ತುವ ಮೂಲಕ ಸದಸ್ಯರುಗಳು ತಮ್ಮ ಬೆಂಬಲ ನೀಡಿದರು,
ಜೆಡಿಎಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ.ವಿ.ನಾರಾಯಣಸ್ವಾಮಿ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮುನಿಯಪ್ಪ ಅವರಿಗೆ ತಲಾ ೯ ಮತಗಳು ಬರುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹಾಲಿಶಾಸಕ ವಿ.ಮುನಿಯಪ್ಪ ಅವರಿಗೆ ಮುಖಭಂಗ :
ತಾಲ್ಲೂಕು ಪಂಚಾಯಿತಿ ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ನಡೆಸಿದ ಕಾಂಗ್ರೆಸ್‌ನ ಎಲ್ಲಾ ಪ್ರಯತ್ನಗಳೂ ವಿಫಲವಾಗಿ ತಾಲ್ಲೂಕು ಪಂಚಾಯಿತಿ ಆಡಳಿತ ಮತ್ತೊಮ್ಮೆ ಜೆಡಿಎಸ್ ಪಾಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಈ ಭಾರಿ ಕಾಂಗ್ರೆಸ್ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ತೆರೆಮರೆಯ ಚಟುವಟಿಕೆಗಳನ್ನು ನಡೆಸಿ ಪಲಿಚೇರ್ಲು ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಜಯಗಳಿಸಿದ್ದ ಜೆಡಿಎಸ್ ಸದಸ್ಯೆ ಮಂಜುಳಮ್ಮ ಅವರನ್ನು ಅಧ್ಯಕ್ಷರನ್ನಾಗಿಸುವ ಆಮಿಷವೊಡ್ಡಿ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್ ಮುಖಂಡರ ಆಮಿಷಕ್ಕೆ ಒಳಗಾದ ಮಂಜುಳಮ್ಮ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಹ ಸಲ್ಲಿಸಿದ್ದರು.
ಚುನಾವಣೆ ಪ್ರಕ್ರಿಯೆ ಶುರುವಾದಾಗ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸದಸ್ಯರಾಗಿದ್ದ ಈ ತಿಮ್ಮಸಂದ್ರ ಕ್ಷೇತ್ರದ ಸದಸ್ಯೆ ವಹೀದಾಬೇಗಂ ಜೆಡಿಎಸ್ ಅಭ್ಯರ್ಥಿಗಳ ಪರ ಕೈಯೆತ್ತಿದಾಗ ಉಳಿದ ಕಾಂಗ್ರೆಸ್ ಸದಸ್ಯರೂ ಸೇರಿದಂತೆ ಅಧ್ಯಕ್ಷರಾಗಲು ನಾಮಪತ್ರ ಸಲ್ಲಿಸಿದ್ದ ಮಂಜುಳಮ್ಮ ಅವರಿಗೆ ಗಾಬರಿ ಆಯಿತು.
ಜೆಡಿಎಸ್ ಪಕ್ಷದವರನ್ನು ಸೆಳೆದ ಖುಷಿಯಲ್ಲಿದ್ದ ಕಾಂಗ್ರೆಸಿಗರಿಗೆ, ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳಬಲ್ಲೆವು ಎಂಬಂತೆ ಕಾಂಗ್ರೆಸಿನ ಒಬ್ಬರನ್ನು ತಮ್ಮ ಪಕ್ಷಕ್ಕೆ ಸದ್ದಿಲ್ಲದೇ ಸೇರಿಸಿಕೊಂಡು ತಾಲ್ಲೂಕು ಪಂಚಾಯಿತಿಯ ಹಿಡಿತವನ್ನು ಜೆಡಿಎಸ್ ಸಾಧಿಸಿತು.