Home News ದಕ್ಷಿಣ ಪಿನಾಕಿನಿ ನದಿ ಮತ್ತು ಕಟ್ಟು ಕಾಲುವೆ ಪುನಶ್ಚೇತನ

ದಕ್ಷಿಣ ಪಿನಾಕಿನಿ ನದಿ ಮತ್ತು ಕಟ್ಟು ಕಾಲುವೆ ಪುನಶ್ಚೇತನ

0

ದಕ್ಷಿಣ ಪೆನ್ನಾರ್ ಎಂದು ಕರೆಯುವ ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಮತ್ತು ಮೇಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟು ಕಾಲುವೆ ಪುನಶ್ಚೇತನ ಮಾಡುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ವಿಜ್ಞಾನಿ ರಾಘವೇಂದ್ರ ಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟು ಕಾಲುವೆಗಳನ್ನು ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.
ಜಿಲ್ಲೆಯ ನಂದಿಬೆಟ್ಟದ ವಾಯುವ್ಯಕ್ಕೆ ಇರುವ ಚನ್ನರಾಯನಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿದು ದೇವನಹಳ್ಳಿ ತಾಲ್ಲೂಕನ್ನು ವಿಜಯಪುರದ ದಕ್ಷಿಣದಲ್ಲಿ ಪ್ರವೇಶಿಸುತ್ತದೆ. ಮುಂದೆ ಹೊಸಕೋಟೆ ತಾಲ್ಲೂಕು ದಾಟಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಜಂಗಮಕೋಟೆ ಭದ್ರನಕೆರೆ ಮತ್ತು ಹೊಸಕೋಟೆ ಕೆರೆ ಈ ನದಿಗೆ ಅಡ್ಡಲಾಗಿ ಕಟ್ಟಿರುವ ಕೆರೆಗಳು. ಅಲ್ಲದೆ ಅಲ್ಲಲ್ಲಿ ಸಣ್ಣ ಕೆರೆಗಳು ಮತ್ತು ಒಡ್ಡುಗಳು ಸಹ ಇವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿಯನ್ನು ಮೇಲೂರು ತಾಲ್ಲೂಕಿನ ಕಟ್ಟು ಕಾಲುವೆಗಳಿಗೆ ಹರಿಸುವ ಮೂಲಕ ಅಂತರ್ಜಲ ವೃದ್ಧಿಯಾಗಲಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು, ಭಕ್ತರಹಳ್ಳಿ, ಕಾಕಚೊಕ್ಕಂಡನಹಳ್ಳಿ ನಂತರ ಜಂಗಮಕೋಟೆಯ ಭದ್ರನಕೆರೆಗೆ ಕಾಲುವೆ ಸೇರುತ್ತದೆ. ಈ ಕಾಲುವೆಯ ಪುನಶ್ಚೇತನ ಅತ್ಯವಶ್ಯಕ ಎಂದು ತಿಳಿಸಿದರು.
ಗುಜರಾತ್ ರಾಜ್ಯದಲ್ಲಿ ಈಚೆಗೆ 100 ಕಿಮೀ ಕಾಲುವೆಯನ್ನು ತೋಡಿದ್ದಾರೆ. ಅದರ ಅಕ್ಕಪಕ್ಕದ ಐದು ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೆ ನಮ್ಮಲ್ಲಿ ಈಗಾಗಲೇ ಇರುವ ಕಾಲುವೆಗಳನ್ನು ಸಂರಕ್ಷಿಸಬೇಕು. ಅದರಲ್ಲಿ ನೀರು ಹರಿಯುವಂತಾಗಬೇಕು. ಚರಂಡಿ ತ್ಯಾಜ್ಯ, ಮನೆ ಬಳಕೆ ನೀರು, ಪ್ಲಾಸ್ಟಿಕ್, ಕಸ ಮುಂತಾದವುಗಳನ್ನು ಕಾಲುವೆಗೆ ಹರಿಸಬಾರದು ಎಂದು ವಿವರಿಸಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಸಾವಿರ ಮಂದಿ ರೈತರ ಗುಂಪನ್ನು ರಚಿಸಿ ಸ್ವಯಂಪ್ರೇರಿತರಾಗಿ ಕಾಲುವೆ ಪುನಶ್ಚೇತನವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕು. ಇದರೊಂದಿಗೆ ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದು, ಜಮೀನಿನಲ್ಲಿ ಮಣ್ಣು ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಸಮಿತಿ ಸದಸ್ಯರಾದ ವೆಂಕಟರೆಡ್ಡಿ, ಲೋಕೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಆರ್.ಎ.ಉಮೇಶ್, ಕೆ.ಮಂಜುನಾಥ್, ರೂಪೇಶ್, ಕಾರ್ಯದರ್ಶಿ ಸಿದ್ದಪ್ಪ, ಧರ್ಮೇಂದ್ರ, ಕೆ.ಎಸ್.ನಂಜೇಗೌಡ, ಕೇಶವಮೂರ್ತಿ, ಲಕ್ಷ್ಮಣ್, ಕೆ.ಪಿ.ಚಂದ್ರೇಗೌಡ, ಗೋಪಾಲರೆಡ್ಡಿ, ಸಿ.ಆರ್.ಚಂದ್ರಶೇಖರ್, ನಟರಾಜ್, ಆಂಜಿನಪ್ಪ, ಸುಧೀರ್, ಸುದರ್ಶನ್ ಹಾಜರಿದ್ದರು.
 

error: Content is protected !!