Home News ದಸರಾ ಗೊಂಬೆಗಳಿಂದ ಪೌರಾಣಿಕ ಕಥನ

ದಸರಾ ಗೊಂಬೆಗಳಿಂದ ಪೌರಾಣಿಕ ಕಥನ

0

ದಸರ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ, ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ. ಆಶ್ವಯುಜ ಶುದ್ಧ ಪಾಡ್ಯ­ದಿಂದ ದಶಮಿಯವರೆಗೆ 10 ದಿನ ನಡೆ­ಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯ ಅನು­ಸರಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಗೊಂಬೆ­ಹಬ್ಬವನ್ನು ನಾಡಿನ ಗೃಹಿಣಿ­ಯರು ಮನೆಮನೆಗಳಲ್ಲಿ ಆಚರಿಸು­ತ್ತಾರೆ.
ನಗರದ ಕುಚ್ಚಣ್ಣನವರ ಕೆ.ವಿ.ಮುರಳೀಧರ್ ಅವರ ಮನೆಯಲ್ಲಿ ಗೊಂಬೆಹಬ್ಬ ವಿಶೇಷವಾಗಿ ಆಚರಿಸಲಾಗುತ್ತಿದೆ. ಸ್ವತಃ ಗೊಂಬೆಗಳನ್ನು ತಯಾರಿಸಿ ಪ್ರತೀ ವರ್ಷ ಒಂದೊಂದು ಪೌರಾಣಿಕ ವಿಷಯವನ್ನಿಟ್ಟುಕೊಂಡು ಗೊಂಬೆಗಳನ್ನು ಜೋಡಿಸಿಡುವುದು ಅವರ ವಿಶೇಷವಾಗಿದೆ.
19oct7ಒಂದೆಡೆ ಭೂಕೈಲಾಸ, ಮತ್ತೊಂದೆಡೆ ಪಟ್ಟದ ಗೊಂಬೆಗಳ ಸಾಲು, ಅವುಗಳ ಸಂಗಡ ಗ್ರಾಮ ಬದುಕಿನ ಚಿತ್ರಣ, ದಶಾವತಾರ, ಶೆಟ್ಟಿ ಅಂಗಡಿ, ವಿವಾಹದ ವಿವಿಧ ಶಾಸ್ತ್ರಗಳು, ಸ್ವಾತಂತ್ರ್ಯ ಹೋರಾಟಗಾರರು ಗೊಂಬೆಗಳ ಮೂಲಕ ವಿವಿಧ ಕಥಾ ಚಿತ್ರಣಗಳನ್ನು ಕಟ್ಟಿಕೊಡುತ್ತಿದೆ.
ಶಿವನಿಂದ ಆತ್ಮಲಿಂಗವನ್ನು ಪಡೆದ ರಾವಣನಿಂದ ಬಾಲಕ ರೂಪಿ ಗಣಪತಿ ಪಡೆದು ನೆಲದ ಮೇಲಿಟ್ಟ ಗೋಕರ್ಣದ ಭೂಕೈಲಾಸ ಕಥೆಯಿದೆ. ಬೋನ್ಸಾಯ್ ಮರಗಳನ್ನು ಅರಳಿಕಟ್ಟೆಯನ್ನಾಗಿಸಿ, ಗುಡಿಸಲು, ಕಲಾಯಿ ಹಾಕುವವರು, ಶಾಸ್ತ್ರ ಹೇಳುವವರು, ಕುರಿ ಮೇಯಿಸುವವರು, ಉಳುವಾ ರೈತ, ಕುಂಟೆ ಸೇರಿಸಿ ಗ್ರಾಮ ಜೀವನದ ಚಿತ್ರಣವಿದೆ. ಚಾಮುಂಡೇಶ್ವರಿಯನ್ನು ಹೊತ್ತ ಆನೆಯೊಂದಿಗೆ ದಸರಾ ಮೆರವಣಿಗೆಯಿದೆ. ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗುವ ವಿವಿಧ ಶಾಸ್ತ್ರಗಳ ಗೊಂಬೆಗಳ ಚಿತ್ರಣವಿದೆ.
ಈ ಗೊಂಬೆಗಳನ್ನು ಹಾಗೂ ಇದ­ರೊಂದಿಗೆ ಹಲವು ಬಗೆಯ ಗೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ ಅಲಂಕರಿಸಿದ್ದಾರೆ.
‘ಪ್ರತೀ ವರ್ಷ ನಾವು ಮನೆಯಲ್ಲಿ ಎಂದಿನಂತೆ ಗೊಂಬೆಗಳನ್ನು ಜೋಡಿಸುವುದರೊಂದಿಗೆ ಒಂದೊಂದು ಪೌರಾಣಿಕ ವಿಷಯಕ್ಕೆ ಸಂಬಂಧಿಸಿದಂತೆ ಗೊಂಬೆಗಳನ್ನು ನಾವೇ ಮನೆಯಲ್ಲಿ ತಯಾರಿಸಿ ಜೋಡಿಸಿಡುತ್ತೇವೆ. ಪದ್ಮಾವತಿ ಕಲ್ಯಾಣ, ಉತ್ತರ ರಾಮಾಯಣ ಮುಂತಾದ ವಿಷಯಗಳನ್ನು ಹಿಂದೆ ಆರಿಸಿಕೊಂಡಿದ್ದೆವು. ಈ ಬಾರಿ ‘ಭೂಕೈಲಾಸ’ ಎಂಬ ವಿಷಯವನ್ನು ಆರಿಸಿಕೊಂಡಿದ್ದೇವೆ. ಮನೆಗೆ ಗೊಂಬೆಗಳನ್ನು ನೋಡಲು ಬರುವ ಮಕ್ಕಳಿಗೆಲ್ಲಾ ಈ ಕಥೆಗಳನ್ನು ಹೇಳುತ್ತಾ ಅವರಲ್ಲಿ ಪೌರಾಣಿಕ ಕಥೆಗಳ ಚಿತ್ರಣವನ್ನು ಕಟ್ಟಿಕೊಡುತ್ತೇವೆ. ಗೊಂಬೆಗಳನ್ನು ನೋಡಲು ಬರುವ ಹಿರಿಯರೂ ಅಚ್ಚರಿಯಿಂದ ಕಥೆಯನ್ನು ಆಲಿಸಿ ಮನಸ್ಸಿನ ಮೂಲೆಯಲ್ಲಿ ಮರೆತಿದ್ದ ಕಥೆಯನ್ನು ಮೆಲುಕು ಹಾಕುತ್ತಾರೆ. ನಮಗಂತೂ ಕಥೆಗೆ ತಕ್ಕಂತೆ ಗೊಂಬೆಗಳನ್ನು ತಯಾರಿಸುವುದಕ್ಕೆ ಬಲು ಉತ್ಸಾಹ’ ಎಂದು ಗೃಹಿಣಿಯರಾದ ರಾಜೇಶ್ವರಿ ಮತ್ತು ರಾಜಲಕ್ಷ್ಮಿ ತಿಳಿಸಿದರು.

error: Content is protected !!