ತಾಲ್ಲೂಕಿನ ಸಾದಲಿ ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿರುವ ಇರುಗಪ್ಪನಹಳ್ಳಿ ಗ್ರಾಮದ ಕೆರೆಗೆ ಆಗಮಿಸಿರುವ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳನ್ನು ಸ್ಥಳೀಯರು ಕೊಲ್ಲುತ್ತಿರುವುದನ್ನು ಕೂಡಲೇ ತಡೆಗಟ್ಟಬೇಕು. ಈ ಅಪರೂಪದ ಹಕ್ಕಿಗಳನ್ನು ಕೊಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕಿನ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರುಗಪ್ಪನಹಳ್ಳಿ ಗ್ರಾಮದ ಕೆರೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮೀನು ಬಿಟ್ಟು ಅದನ್ನು ಹರಾಜಿನ ಮೂಲಕ ಮಾರಲಾಗಿದೆ. ಮೀನನ್ನು ತಿನ್ನಲು ಬರುತ್ತವೆಂಬ ಕಾರಣವೊಡ್ಡಿ ಸ್ಥಳೀಯರು ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳನ್ನು ಕೊಲ್ಲುತ್ತಿದ್ದಾರೆ.
ದೇಶೀಯ ವಲಸೆ ಹಕ್ಕಿಗಳಾದ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು ಸಾಕಷ್ಟು ದೊಡ್ಡ ಹಕ್ಕಿಗಳು. ಭಾರತದಾದ್ಯಂತ ವಲಸೆ ಹೋಗುವ ಇವು ಆಗ್ನೇಯ ಏಷಿಯಾ ದೇಶಗಳಲ್ಲೂ ಕಂಡುಬರುತ್ತವೆ. ಕಿತ್ತಳೆ ಬಣ್ಣದ ಕೊಕ್ಕು, ತಲೆ ಮತ್ತು ಗುಲಾಬಿ ಬಣ್ಣದ ಪುಕ್ಕಗಳನ್ನು ಹೊಂದಿರುವ ಇವು ಸಾಮಾನ್ಯವಾಗಿ ಕೆರೆ, ಕುಂಟೆ ಮತ್ತು ಜೌಗು ಪ್ರದೇಶಗಳನ್ನರಸಿ ಗುಂಪುಗುಂಪಾಗಿ ಆಗಮಿಸುತ್ತವೆ. ಬಾಗೇಪಲ್ಲಿ ಬಳಿಯ ವೀರಾಪುರ ಗ್ರಾಮವನ್ನು ಈ ಹಕ್ಕಿಗಳ ಸಂರಕ್ಷಿತ ತಾಣವನ್ನಾಗಿ ರೂಪಿಸಲಾಗಿದೆ. ರಾಜ್ಯದ ಕೊಕ್ಕರೆಬೆಳ್ಳೂರಿನಲ್ಲೂ ಅಲ್ಲಿನ ಗ್ರಾಮಸ್ಥರ ನೆರವಿನಿಂದ ಈ ಹಕ್ಕಿಗಳ ವಾಸಸ್ಥಾನ ಹೆಸರುವಾಸಿಯಾಗಿದೆ. ಗ್ರಾಮಗಳಲ್ಲಿನ ಮರಗಳ ಮೇಲೆ ಈ ಹಕ್ಕಿಗಳು ಚಳಿಗಾಲದಲ್ಲಿ ಗೂಡು ಕಟ್ಟಿ ಮರಿಗಳನ್ನು ಸಾಕುತ್ತವೆ. ಗುಂಪು ಗುಂಪಾಗಿ ಎತ್ತರದ ಮರಗಳ ಮೇಲೆ ಕಡ್ಡಿಗಳನ್ನು ಒಟ್ಟು ಮಾಡಿ ಗೂಡು ಕಟ್ಟುವ ಈ ಹಕ್ಕಿಗಳು ಗುಂಪಲ್ಲೇ ಆಹಾರಕ್ಕಾಗಿ ಕೆರೆಗಳ ಅಂಚಿನಲ್ಲಿ ಕಾಣಿಸುತ್ತವೆ.
ಈ ರೀತಿಯ ಹಕ್ಕಿಗಳನ್ನು ಕೊಲ್ಲುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಇವುಗಳ ಕುರಿತಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು. ತಪ್ಪೆಸಗಿದವರಿಗೆ ಶಿಕ್ಷೆ ಆಗಬೇಕು. 100 ಸೆ.ಮೀ ಎತ್ತರದ ಇವು 3 ಕೆ.ಜಿ ತೂಕವಿರುತ್ತವೆ. ಹಾಗಾಗಿ ಮಾಂಸದ ಆಸೆಯಿಂದ ಹಕ್ಕಿಗಳ ಬೇಟೆ ನಡೆದರೆ ಅವುಗಳ ಸಂತತಿಯೇ ನಶಿಸುತ್ತವೆ. ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕೆರೆಯು ಮನುಷ್ಯರೊಬ್ಬರ ಆಸ್ತಿಯಲ್ಲ, ಸಕಲ ಜೀವಿಗಳೂ ಇದ್ದರೆ ಮಾತ್ರ ಮಾನವ ಬದುಕುಳಿಯಲು ಸಾಧ್ಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.