Home News ದೇವರಮಳ್ಳೂರಿನ ಕೆರೆ ಪುನಶ್ಚೇತನಕ್ಕೆ ಸಮಿತಿ ರಚನೆ

ದೇವರಮಳ್ಳೂರಿನ ಕೆರೆ ಪುನಶ್ಚೇತನಕ್ಕೆ ಸಮಿತಿ ರಚನೆ

0

ಆನಂದನ ಕೋಕೋಕೋಲಾ ಕಂಪೆನಿಯ ಆರ್ಥಿಕ ಸಹಾಯದೊಂದಿಗೆ ಮೈರಾಡ ಸಂಸ್ಥೆಯ ವತಿಯಿಂದ ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರಿನಲ್ಲಿ ನಡೆದ ಕೆರೆ ಸಮಿತಿಯ ಪುನಶ್ಚೇತನ ಆಯ್ಕೆಯ ಸಭೆಯಲ್ಲಿ ಅವರು ಮಾತನಾಡಿದರು.
ದೇವರಮಳ್ಳೂರಿನ ಕೆರೆಯ ಹೂಳನ್ನು ತೆಗೆಯುವುದು, ಕಟ್ಟೆ, ಕೋಡಿಗಳನ್ನು ದುರಸ್ಥಿ ಮಾಡಿಸುವ ಮೂಲಕ ಮುಂದಿನ ಮಳೆಗಾಲದ ಹೊತ್ತಿಗೆ ಕೆರೆಯ ನೀರಿನ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸು ಯೋಜನೆಯನ್ನು ರೂಪಿಸಲಾಗಿದೆ. ಸುಮಾರು ಒಂಭತ್ತೂವರೆ ಲಕ್ಷ ರೂಗಳ ಯೋಜನೆಯಿದು. ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ ಮೈರಾಡ ಸಹಕಾರದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ರೇಷ್ಮೆ ರೈತ ಉತ್ಪಾದಕ ಕಂಪೆನಿಯ ನೇತೃತ್ವದಲ್ಲಿ ಗ್ರಾಮಸ್ಥರನ್ನೊಳಗೊಂಡ ಸಮಿತಿಯನ್ನು ರಚಿಸಿ ಲೋಪದೋಷಗಳಿರದಂತೆ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್‌.ಜನಾರ್ಧನಮೂರ್ತಿ ಮಾತನಾಡಿ, ಕೆರೆಯು ಪಾತ್ರೆಯಿದ್ದಂತಿರಬೇಕು, ತಟ್ಟೆಯಂತಿರಬಾರದು. ಬಿದ್ದ ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ನಮ್ಮಲ್ಲಿ ಬಿದ್ದ ಮಳೆ ನೀರು ನಮಗೇ ಉಪಯೋಗವಾಗಲಿ. ಮೈರಾಡ ಸಂಸ್ಥೆದಿಂದ ಈ ರೀತಿಯ ಹಲವು ಸಾಮಾಜಿಕ ಒಳಿತಿನ ಯೋಜನೆಗಳಿದ್ದು, ಒಂದೊಂದಾಗಿ ಅನುಷ್ಟಾನಗೊಳಿಸಲಾಗುವುದು. ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಜನೆಯ ಅನುಷ್ಟಾನಕ್ಕಾಗಿ 15 ಜನರ ಸಮಿತಿಯನ್ನು ರಚಿಸಲಾಯಿತು. ಸಮಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ರೈತರು, ಸ್ತ್ರೀ ಶಕ್ತಿ ಗುಂಪಿನಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಮೈರಾಡ ಸಂಸ್ಥೆಯ ಅಧಿಕಾರಿ ವೆಂಕಟೇಶ್‌, ಗ್ರಾಮ ಪಂಚಾಯಿತಿ ಅಧ್ಯಕಷೆ ವೆಂಕಟಲಕ್ಷ್ಮಮ್ಮ, ಪಿಡಿಒ ರಮಾಕಾಂತ್‌, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್‌, ಪ್ರಕಾಶ್‌, ದೀಪಕ್‌, ಅನಿಲ್‌ಕುಮಾರ್‌, ರೇಷ್ಮೆ ಇಲಾಖೆಯ ಪ್ರಕಾಶ್‌, ಮುನಿರಾಜು, ಗ್ರಾಮಸ್ಥರಾದ ಕೆಂಪಣ್ಣ, ವೆಂಕೋಬರಾವ್‌ ಹಾಜರಿದ್ದರು.

error: Content is protected !!