Home News ದೇವಿಗೆ ಶಕ್ತಿಯನ್ನು ನೀಡಿ ತಾವು ಗೊಂಬೆಗಳಾಗಿ ನಿಂತ ದೇವತೆಗಳನ್ನು ಪೂಜಿಸುವ ಗೊಂಬೆಹಬ್ಬ

ದೇವಿಗೆ ಶಕ್ತಿಯನ್ನು ನೀಡಿ ತಾವು ಗೊಂಬೆಗಳಾಗಿ ನಿಂತ ದೇವತೆಗಳನ್ನು ಪೂಜಿಸುವ ಗೊಂಬೆಹಬ್ಬ

0

‘ಚಾಮುಂಡೇಶ್ವರಿ ದೇವಿಯು ದುಷ್ಟನಾದ ಮಹಿಷಾಸುರನನ್ನು ಸಂಹರಿಸಲು ಶಕ್ತಿ ರೂಪಳಾಗಿ, ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಬಂದಳು. ರಾಕ್ಷಸನಾದ ಮಹಿಷಾಸುರನನ್ನು ವಿಜಯ ದಶಮಿಯ ದಿನ ಸಂಹಾರ ಮಾಡಿದಳು. ದೇವಿಗೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ನೀಡಿ ತಾವು ಗೊಂಬೆಗಳಾಗಿ ನಿಂತರು. ಆ ಎಲ್ಲಾ ದೇವತೆಗಳ ಪ್ರತಿರೂಪವನ್ನೇ ನಾವು ನವರಾತ್ರಿಯ ಗೊಂಬೆಹಬ್ಬವನ್ನಾಗಿಸಿ ಪೂಜಿಸುವ ಮೂಲಕ ಆಚರಿಸುತ್ತೇವೆ. ಅದಕ್ಕಾಗಿಯೇ ಮಣ್ಣಿನ ಗೊಂಬೆಗಳನ್ನೇ ಗೊಂಬೆಹಬ್ಬದಲ್ಲಿ ಇಡುವ ಸಂಪ್ರದಾಯವಿದೆ’ ಎಂದು ವೈದ್ಯ ಡಾ.ರವಿಶಂಕರ್‌ ತಮ್ಮ ಮನೆಯ ಗೊಂಬೆಗಳ ಆಚರಣೆಯ ಉದ್ದೇಶವನ್ನು ವಿವರಿಸಿದರು.
ಹಿಂದೆ ಈ ಬೊಂಬೆಗಳ ಪ್ರದರ್ಶನದಲ್ಲಿ ಮಾನವಾಕಾರದ ಬೊಂಬೆಗಳನ್ನು ತಯಾರಿಸುತ್ತಿದ್ದರು. ಕೇವಲ ತಲೆಯ ಭಾಗ ಮಾತ್ರ ಇರುವ ಈ ಗೊಂಬೆಗಳಿಗೆ ದೇಹದಾಕೃತಿಯನ್ನು ಕೊಟ್ಟು ಉಡುಗೆ ತೊಡುಗೆಗಳನ್ನು ಉಡಿಸುವುದೇ ದೊಡ್ಡ ಸವಾಲಾಗಿತ್ತು.
ಮರೆತೇ ಹೋಗಿದ್ದ ಈ ರೀತಿಯ ಗೊಂಬೆಗಳನ್ನು ನಗರದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್ ತಮ್ಮ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ತಮ್ಮ ಅಜ್ಜಿಯ ಕಾಲದಿಂದ ಉಳಿಸಿಕೊಂಡು ಬಂದಿರುವ ಈ ನೂರಕ್ಕೂ ಹೆಚ್ಚು ವರ್ಷದ ಗೊಂಬೆಗಳ ತಲೆ ಭಾಗಕ್ಕೆ ದೇಹದಾಕೃತಿಯನ್ನು ಕಾಲಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ. ಅದರೊಂದಿಗೆ ಸಂದೇಶವನ್ನೂ ಸಾರಿದ್ದಾರೆ. ಅಂತರ್ಜಾತೀಯ ವಿವಾಹವನ್ನು ಪ್ರತಿಪಾದಿಸುವ ಅಕ್ಕಪ್ಪ ಮತ್ತು ಅಕ್ಕಮ್ಮ ದೃಷ್ಟಿಬೊಂಬೆಗಳು, ರಾಜಸ್ಥಾನಿ ಬೆಡಗಿ ಮತ್ತು ಸಾಂಪ್ರದಾಯಿಕ ದಂಪತಿಗಳ ರೂಪವನ್ನು ನೀಡಿದ್ದಾರೆ.

ಅಂತರ್ಜಾತೀಯ ವಿವಾಹವನ್ನು ಪ್ರತಿಪಾದಿಸುವ ಅಕ್ಕಪ್ಪ ಮತ್ತು ಅಕ್ಕಮ್ಮ ದೃಷ್ಟಿಬೊಂಬೆಗಳು ಮತ್ತು ಘಟೋತ್ಕಚನ ಭೋಜನ

‘ದೇವನಹಳ್ಳಿ ಮೂಲದವರಾದ ನಮ್ಮ ಹಾರೋಬಂಡೆ ಕುಟುಂಬ ಗೊಂಬೆಗಳನ್ನು ಜೋಡಿಸುವುದಕ್ಕೆ, ಕಲಾತ್ಮಕವಾಗಿ ಪ್ರದರ್ಶಿಸುವುದಕ್ಕೆ ಪ್ರಸಿದ್ಧಿಯಾಗಿತ್ತು. ನಮ್ಮಜ್ಜಿಯ ಮನೆಯಲ್ಲಿ ರಾಜ, ರಾಣಿ, ಯುವರಾಜ, ಯುವರಾಣಿ, ಮಂತ್ರಿ, ಸೈನಾಧಿಪತಿ, ದರ್ಬಾರ್ ಎಲ್ಲವನ್ನೂ ಬೊಂಬೆಗಳ ಮೂಲಕವೇ ನಿರೂಪಿಸುತ್ತಿದ್ದರು. ಗೊಂಬೆಗಳೆಂದರೆ ಕೇವಲ ತಲೆಗಳು ಮಾತ್ರ. ಅವಕ್ಕೆ ಉಡುಗೆಗಳನ್ನು ತೊಡಿಸಿ, ಕೈಕಾಲುಗಳನ್ನು ನಾವೇ ತಯಾರಿಸಿಡಬೇಕು. ಬೊಂಬೆಗಳಿಗೆ ಕೊಡುವ ಆಕಾರ, ನಿಲುವು, ಮೂಡಿಸುವ ಭಾವ, ತೊಡಿಸುವ ಉಡುಗೆ ತೊಡುಗೆ, ರಚನಾ ಕ್ರಿಯೆಯಲ್ಲಿ ತೋರಿಸುವ ನಯ ನಾಜೂಕು, ಇವೆಲ್ಲ ಸೊಬಗನ್ನು ಹೆಚ್ಚಿಸುತ್ತವೆ. ನಮ್ಮಜ್ಜಿಯಿಂದ ಕೊಡುಗೆಯಾಗಿ ನಮ್ಮ ಪಾಲಿಗೆ ಬಂದ ಗೊಂಬೆಗಳನ್ನು ಪ್ರತಿವರ್ಷ ವಿಶೇಷವಾಗಿ ಅಲಂಕರಿಸಿ, ವಸ್ತ್ರವನ್ನೆಲ್ಲಾ ತೊಡಿಸಿ ಜೋಡಿಸಿಡುತ್ತೇವೆ. ಈ ಗೊಂಬೆಗಳ ಪ್ರದರ್ಶನಕ್ಕೆ ‘ಹಾರೋಬಂಡೆ ಬೊಂಬೆ ಉತ್ಸವ’ ಎಂದು ಹೆಸರಿಟ್ಟಿದ್ದೇವೆ’ ಎಂದು ಪುರಾತನ ಗೊಂಬೆಗಳ ಬಗ್ಗೆ ಡಾ.ರೋಹಿಣಿ ರವಿಶಂಕರ್ ತಿಳಿಸಿದರು.
ವೈವಿಧ್ಯಮಯ ಮಣ್ಣಿನ ಗೊಂಬೆಗಳು :
ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಪುಸ್ತದೊಂದಿಗಿನ ಸರಸ್ವತಿ ಮೂರ್ತಿ ಮತ್ತು ಈಶ್ವರನ ಆಸ್ಥಾನ

ಪುರಾತನ ಗೊಂಬೆಗಳ ನಡುವೆ, ಅಗ್ರಪೂಜಿತೆ ತಾಯಿ ಚಾಮುಂಡೇಶ್ವರಿ, ಕಾಡಿನಲ್ಲಿ ಬುಡಕಟ್ಟು ತಾಂಡ, ಬುದ್ಧ ವಿಹಾರ, ಘಟೋತ್ಕಚನ ಭೋಜನ, ತಂಜಾವೂರಿನ ನೃತ್ಯಗಾರ್ತಿ ಬೊಂಬೆಗಳು, ಪುರಿ ಜಗನ್ನಾಥ, ಬಲಭದ್ರ, ಕೃಷ್ಣ, ರುಕ್ಮಿಣಿ, ಬಲರಾಮ, ಆದಿಯೋಗಿ, ಗಂಡು ಹೆಣ್ಣಿಮ ಸಮಾನತೆ ಸಾರುವ ಅರ್ಧನಾರೀಶ್ವರ, ಗುಜರಾತಿನ ಗಾರ್ಭ ನೃತ್ಯ, ನಂದಗೋಕುಲ, ಗುಹನ ದೋಣಿಯಲ್ಲಿ ಹೊರಟ ರಾಮ ಲಕ್ಷ್ಮಣ ಸೀತೆ, ದೃತರಾಷ್ಟ್ರನ ದರ್ಬಾರ್‌, ಗಣೇಶನ ವಿವಿಧ ರೂಪಗಳು, ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಪುಸ್ತದೊಂದಿಗಿನ ಸರಸ್ವತಿ ಮೂರ್ತಿ, ಈಶ್ವರನ ಆಸ್ಥಾನ, ಅಷ್ಟ ಲಕ್ಷ್ಮಿಯರು, ಪಟ್ಟದ ಗೊಂಬೆಗಳ ಜೊತೆ ಪಟ್ಟದ ಆನೆ, ಕುದುರೆ, ಹಸು, ದಶಾವತಾರ, ಶೆಟ್ಟಿಯ ಸಿರಿಧಾನ್ಯದ ಅಂಗಡಿ, ಆಡಿಸಿ ನೋಡಿ ಬೀಳಿಸಿ ನೋಡು ಗೊಂಬೆಗಳು, ಮಣ್ಣಿನಲ್ಲಿ ತಯಾರಾದ ಫಲಪುಷ್ಪಗಳು ಇವೆ.
ಪರಿಸರ ಕಾಳಜಿ :
ಪರಿಸರ ಪ್ರೇಮವನ್ನು ಪ್ರತಿನಿಧಿಸುವಂತೆ ಒಂದು ಭಾಗದಲ್ಲಿ ಪೈರನ್ನು ಬೆಳೆಯುವ ಮೂಲಕ ಕಾಡನ್ನು, ಕಾಡುಪ್ರಾಣಿಗಳು, ಹಕ್ಕಿಗಳು, ಕಾಡಿನಲ್ಲಿ ವಾಸಿಸುವವರ ಬುಡಕಟ್ಟು ಜನರನ್ನು ಗೊಂಬೆಗಳ ಮೂಲಕ ಪ್ರದರ್ಶಿಸಿದ್ದಾರೆ.

error: Content is protected !!