Home News ದೊಗರನಾಯಕನಹಳ್ಳಿ ಊರ ದೇವತೆ ಶ್ರೀಗಂಗಮ್ಮ ಜಾತ್ರೆ

ದೊಗರನಾಯಕನಹಳ್ಳಿ ಊರ ದೇವತೆ ಶ್ರೀಗಂಗಮ್ಮ ಜಾತ್ರೆ

0

ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ದೊಗರನಾಯಕನಹಳ್ಳಿಯಲ್ಲಿ ಊರ ದೇವತೆ ಶ್ರೀಗಂಗಮ್ಮ ಸೇರಿದಂತೆ ಊರ ದೇವರುಗಳ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರೆಯ ಅಂಗವಾಗಿ ಊರಲ್ಲಿನ ಶ್ರೀಗಂಗಮ್ಮ ದೇವಿಯ ದೇವಾಲಯವನ್ನು ಬಣ್ಣದಿಂದ ಸಿಂಗಾರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾವು ಬೇವು ಬಾಳೆ ದಿಂಡಿನ ತಳಿರು ತೋರಣಗಳಿಂದ ದೇವಾಲಯಗಳು ಕಂಗೊಳಿಸುತ್ತಿತ್ತು.
ಸೋಮವಾರ ದೇವಾಲಯದಲ್ಲಿ ಗಂಗಾ ಪೂಜೆಯೊಂದಿಗೆ ಜಾತ್ರಾ ಮಹೋತ್ಸವದ ಪೂಜೆಯನ್ನು ಆರಂಭಿಸಿದ್ದು ನಾನಾ ಹೋಮ ಹವನ ಹಾಗೂ ವಿದವಿಧದ ಪೂಜೆಗಳನ್ನು ನೆರವೇರಿದ್ದು ಮಂಗಳವಾರ ದೀಪೋತ್ಸವ ನೆರವೇರಿಸಲಾಯಿತು.
ಗ್ರಾಮದ ಎಲ್ಲ ಮನೆಗಳನ್ನೂ ಸುಣ್ಣ ಬಣ್ಣದಿಂದ ಅಲಂಕರಿಸಿ ಬೀದಿ ಬೀದಿಗಳಲ್ಲೂ ವಿದ್ಯುತ್ ದೀಪಗಳನ್ನು ಇಳಿ ಬಿಡಲಾಗಿತ್ತು. ಜಾತ್ರೆಯ ವೈಭವವನ್ನು ಸಾರುವ ದೇವರುಗಳ ಕೀರ್ತನೆ, ಜನಪದ ಸಂಗೀತ, ಜಾತ್ರೆಗೆ ಕಳೆಗಟ್ಟುವ ಹಾಡುಗಳು ಝೇಂಕರಿಸುತ್ತಿದ್ದವು. ಗ್ರಾಮದ ಹೆಂಗೆಳೆಯರು, ಮುತ್ತೈದೆಯರು ಅಲಂಕೃತರಾಗಿ ಅಂದ ಚೆಂದದ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಊರ ಸುತ್ತಲೂ ಪ್ರದಕ್ಷಿಣೆ ಹಾಕಿ ದೇವರಿಗೆ ಆರತಿ ಬೆಳಗಿದರು.
ತಮ್ಮ ಇಷ್ಟಾರ್ಥಗಳು ಈಡೇರಲಿ, ಕಾಲ ಕಾಲಕ್ಕೆ ಮಳೆಯಾಗಿ ಮಳೆಯಿಂದ ಬೆಳೆಯಾಗಿ ಎಲ್ಲರ ಮನೆ ಮನೆಗಳಲ್ಲೂ ದವಸ ದಾನ್ಯ ತುಂಬಲಿ. ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಭಗವಂತನಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಗಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ನೈವೇದ್ಯ ಅರ್ಪಿಸಿ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಗ್ರಾಮಸ್ಥರು ಊರ ಹೆಬ್ಬಾಗಿಲಿನಲ್ಲಿ ಹೂ ಹಾರ ಹಾಕಿ ಬರ ಮಾಡಿಕೊಂಡು ತಮಟೆ ಇನ್ನಿತರೆ ಜನಪದ ಕಲಾ ತಂಡಗಳೊಂದಿಗೆ ಊರಲ್ಲಿ ಮೆರವಣಿಗೆ ನಡೆಸಿದರು. ಅವರು ಗ್ರಾಮದ ಹಲವರ ಮನೆಗಳಿಗೆ ಭೇಟಿ ನೀಡಿ ಜಾತ್ರೆಯ ಶುಭಾಶಯವನ್ನು ಕೋರಿದರು.
ಸಂಸದ ಕೆ.ಎಚ್.ಮುನಿಯಪ್ಪ, ಎಪಿಎಂಸಿ ನಿರ್ದೆಶಕ ಡಿ.ವಿ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಮುನಿಕೃಷ್ಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಕಂಬದಹಳ್ಳಿ ಸತೀಶ್, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಮಳ್ಳೂರು ಶ್ರೀನಿವಾಸರೆಡ್ಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ಕೊತ್ತನೂರು ಜ್ಞಾನೇಶ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.