ಮಾತೃತ್ವದ ಪರಿಕಲ್ಪನೆ, ಭಾರತೀಯ ಸಂಸ್ಕೃತಿಯ ಆಹಾರ ಪದ್ಧತಿ, ಧರ್ಮ ಸಂಸ್ಕೃತಿಗಳ ರಕ್ಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ಮನೆಯೇ ಮೊದಲ ಪಾಠಶಾಲೆ ತಾಯೇ ಮೊದಲ ಗುರು, ಮಾತೃದೇವೋಭವ ಎಂದು ಹಿರಿಯರು ಹೇಳಿರುವುದು ಸಾರ್ವಕಾಲಿಕ ಸತ್ಯ ಎಂದು ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ಮಾತೃ ಭೋಜನ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಯು ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಲು ಮಾತೃಭೋಜನ ಎಂಬ ಕಾರ್ಯಕ್ರಮ ಅವಶ್ಯವಾಗಿದೆ. ಈ ಮೂಲಕ ಉನ್ನತ ಆದರ್ಶಗಳನ್ನು ಸಂಸ್ಕಾರಗಳನ್ನು ಎಳೆಯ ವಯಸ್ಸಿನಿಂದಲೇ ಮಕ್ಕಳು ಮೈಗೊಡಿಸಿಕೊಳ್ಳುವಂತೆ ಮಾಡ¬ಬೇಕಿದೆ ಎಂದು ಹೇಳಿದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತೇವೆ. ನಮ್ಮದೇ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರ ನಿಜವಾದ ಬೇಡಿಕೆ ಏನು ಎಂದು ಗುರುತಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ. ನಮ್ಮ ಮಕ್ಕಳೊಡನೆ ಕುಳಿತು, ಅವರ ಮನದಾಳದ ಮಾತುಗಳನ್ನು ಆಲಿಸುವ ವ್ಯವಧಾನವನ್ನು ನಾವು ತೋರಿಸುತ್ತಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ವಿವಿಧ ಕನ್ನಡ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಮಕ್ಕಳ ತಾಯಂದಿರು ಬುತ್ತಿಯನ್ನು ತಂದಿದ್ದು, ಮಕ್ಕಳಿಗೆ ತಿನ್ನಿಸಿದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಚಂದನಾ ಅಶೋಕ್, ಪ್ರಾಂಶುಪಾಲ ಥಾಮಸ್ ಫಿಲಿಪ್, ಶ್ರೀನಿವಾಸರೆಡ್ಡಿ, ಲೋಕೇಶ್, ಗಣೇಶಪ್ಪ, ಮುನಿಶಾಮಪ್ಪ ಹಾಜರಿದ್ದರು.