Home News ನಗರಕ್ಕೆ ಉತ್ತಮ ಸುಸಜ್ಜಿತ ಗ್ರಂಥಾಲಯದ ಕಟ್ಟಡ ಅಗತ್ಯವಿದೆ

ನಗರಕ್ಕೆ ಉತ್ತಮ ಸುಸಜ್ಜಿತ ಗ್ರಂಥಾಲಯದ ಕಟ್ಟಡ ಅಗತ್ಯವಿದೆ

0

ನಗರ ಕೇಂದ್ರ ಗ್ರಂಥಾಲಯಕ್ಕೆ ನಿವೇಶನವನ್ನು ಕೋರಿದ್ದು,ಈಗಿರುವ ಸ್ಥಳವನ್ನು ಜಿಲ್ಲಾಧಿಕಾರಿಗಳ ಅನುಮೋದನೆಯ ಮೇರೆಗೆ ನೀಡಲಾಗುವುದು ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರಕ್ಕೆ ಉತ್ತಮ ಸುಸಜ್ಜಿತ ಗ್ರಂಥಾಲಯದ ಕಟ್ಟಡ ಅಗತ್ಯವಿದೆ. ಗ್ರಂಥಾಲಯಕ್ಕೆ ನಿವೇಶನ ನೀಡುವ ಬಗ್ಗೆ ಈಗಾಗಲೇ ನಗರಸಭೆಯಲ್ಲಿ ಚರ್ಚೆ ನಡೆದಿದೆ. ಜನಸಂಚಾರ ಹೆಚ್ಚಿರದ, ವಾಹನ ಹಾಗೂ ಇತರ ಶಬ್ದ ಮಾಲಿನ್ಯವಿರದ ಈಗಿರುವ ಸ್ಥಳ ಪ್ರಶಸ್ತವಾಗಿದೆ ಎಂದು ಹೇಳಿದರು.
ನಗರಸಭೆಯ ಆಯುಕ್ತ ಚಲಪತಿ ಮಾತನಾಡಿ, ಗ್ರಂಥಾಲಯಕ್ಕೆ ಕೇವಲ ಹಿರಿಯರು ಬಂದರೆ ಸಾಲದು, ಮಕ್ಕಳನ್ನು ಕರೆತರಬೇಕು. ಎಳೆಯ ವಯಸ್ಸಿನಲ್ಲಿಯೇ ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಬೇಕು. ಓದುಗರನ್ನು ಆಕರ್ಷಿಸಲು, ಹೊಸ ಓದುಗರನ್ನು ಹುಟ್ಟುಹಾಕಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಂಕರ್ ಮಾತನಾಡಿ, ಜನಸಾಮಾನ್ಯರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವುದು ಹಾಗೂ ಗ್ರಂಥಾಲಯದ ಸದಸ್ಯತ್ವವನ್ನು ಹೆಚ್ಚಿಸುವುದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ತಿಂಗಳಿಗೊಮ್ಮೆ ಗ್ರಂಥಾಲಯದಲ್ಲಿ ‘ಓದಿನರಮನೆಯಲ್ಲಿ ಪುಸ್ತಕ ಪರಿಚಯ’ ಎಂಬ ಕಾರ್ಯಕ್ರಮದ ಮೂಲಕ ಸ್ಥಳೀಯ ಲೇಖಕರ ಪರಿಚಯ ಮತ್ತು ಪುಸ್ತಕಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಹೇಳಿ, ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ್ ಕುರಿತು ವಿವರಿಸಿದರು.
ನಗರಸಭಾ ಸದಸ್ಯ ಅಫ್ಸರ್ ಪಾಷ, ಗ್ರಂಥಾಲಯ ಸಹಾಯಕ ಶ್ರೀನಿವಾಸಯ್ಯ, ಸಿಬ್ಬಂದಿ ಬಾಂಧವ್ಯ, ಮಂಜುನಾಥಗೌಡ, ಕೆ.ಬಿ.ಮಂಜುನಾಥ್ ಹಾಜರಿದ್ದರು.
 

error: Content is protected !!