Home News ನಗರಸಭೆಯ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ

ನಗರಸಭೆಯ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ

0

ಚುನಾಯಿತ ಜನಪ್ರತಿನಿಧಿಗಳು ಕೇಳಿರುವ ಮಾಹಿತಿಯನ್ನು ಸಭೆಯಲ್ಲಿ ಅಧಿಕಾರಿಗಳು ನೀಡುತ್ತಿಲ್ಲ ಎಂದು ನಗರಸಭೆ ಸದಸ್ಯ ಜೆ.ಎಂ.ಬಾಲಕೃಷ್ಣ ಆರೋಪಿಸಿದರು.
ನಗರಸಭೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಅವರು ಸ್ಪಂದಿಸದ ಅಧಿಕಾರಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಗರದ ೨೭ ವಾರ್ಡುಗಳ ಸದಸ್ಯರ ತಮ್ಮ ತಮ್ಮ ವಾರ್ಡಿಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳು ಹಾಗು ಮೂಲಭೂತ ಸವಲತ್ತುಗಳ ಬಗ್ಗೆ ನಗರಸಭೆಗೆ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಹಾಗು ಸಿಬ್ಬಂದಿ ಈ ಬಗ್ಗೆ ಕ್ರಮ ಜರುಗಿಸಿರುವ ಬಗ್ಗೆ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ. ಇನ್ನು ನಾಲ್ಕೈದು ತಿಂಗಳಿಗೊಮ್ಮೆ ಕರೆಯುವ ಸಭೆಯಲ್ಲಾದರೂ ಈ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರೆ ಅದೂ ಇಲ್ಲದೇ ಸಭೆಯಲ್ಲಿ ಬೇಕಾ ಬಿಟ್ಟಿ ಉತ್ತರ ನೀಡುವುದು ಸರಿಯಲ್ಲ. ಹೀಗಾದರೆ ಸಭೆ ಮಾಡುವ ಜರೂರತ್ತಾದರೂ ಏನು ಎಂದು ಪ್ರಶ್ನಿಸಿದರು.
ನಗರದ ೧ ನೇ ವಾರ್ಡಿನ ಸದಸ್ಯ ಲಕ್ಷ್ಮಣ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಒಳಪಡುವ ನಗರಸಭೆಗೆ ಸೇರಿದ ಖಾಲಿ ನಿವೇಶನಗಳು ಮತ್ತು ನಗರಸಭೆ ಆಸ್ತಿಯ ವಿವರ ನೀಡುವಂತೆ ಕಚೇರಿಗೆ ಮನವಿ ಮಾಡಿ ತಿಂಗಳಾದರೂ ಇದುವರೆಗೂ ನೀಡಿಲ್ಲ. ನಗರಸಭೆಯಲ್ಲಿರುವ ವಾಹನಗಳ ವಿವರ ಹಾಗು ಅದು ಎಲ್ಲಿ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ಕೇಳಿದರೂ ಕಚೇರಿಯಲ್ಲಿ ಮಾಹಿತಿಯಿಲ್ಲ. ವಿನಾಕಾರಣ ವಾಹನಗಳ ಹೆಸರಿನಲ್ಲಿ ಡೀಸೆಲ್ ಖರೀದಿಗೆ ಲಕ್ಷಾಂತರ ರೂ ಹಣ ವ್ಯಯವಾದಂತೆ ಪುಸ್ತಕಗಳಲ್ಲಿ ನಮೂದಿಸುತ್ತಿದ್ದಾರೆ. ಇನ್ನು ನಗರದ ವಿವಿದೆಡೆ ಎಷ್ಟು ಕೊಳವೆ ಬಾವಿ ಕೊರೆಸಲಾಗಿದೆ, ಎಷ್ಟು ಕೊಳವೆ ಬಾವಿಗೆ ಮೋಟರ್ ಪಂಪು ಅಳವಡಿಸಲಾಗಿದೆ, ಪಂಪು ಮೋಟರ್ ಅಳವಡಿಸದೇ ಇರುವ ಕೊಳವೆ ಬಾವಿಗಳೆಷ್ಟು ಎಂಬುದರ ಬಗ್ಗೆ ಮಾಹಿತಿ ಕೇಳಿದರೂ ಈವರೆಗೂ ಅಧಿಕಾರಿಗಳು ನೀಡುತ್ತಿಲ್ಲ. ಜನಪ್ರತಿನಿಧಿಗಳಿಗೆ ಈ ರೀತಿ ಮಾಹಿತಿ ನೀಡದೇ ಸತಾಯಿಸುವ ಸಿಬ್ಬಂದಿ ಜನ ಸಾಮಾನ್ಯರ ಕೆಲಸ ಎಷ್ಟು ಮಾತ್ರ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಶಿಡ್ಲಘಟ್ಟದ ನಗರಸಭೆಯಲ್ಲಿ ಸೋಮವಾರ ಸ್ಥಾಯಿ ಸಮಿತಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಅಧ್ಯಕ್ಷ ಹಾಗು ಉಪಾಧ್ಯಕ್ಷರ ಗೈರು ಹಾಜರಿಯಲ್ಲಿ ತಾವೇ ನಡೆಸುವಂತೆ ಆಯುಕ್ತ ಚಲಪತಿರನ್ನು ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಚಲಪತಿ ನಗರಸಭೆ ಸದಸ್ಯರೂ ಮತ್ತು ಜನಸಾಮಾನ್ಯರು ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಸಭೆಯಲ್ಲಿ ನಗರದ ಎಲ್ಲಾ ವಾರ್ಡುಗಳಲ್ಲಿ ಮೂಲಭೂತ ಸವಲತ್ತುಗಳಾದ ಬೀದಿ ದ್ವೀಪ, ಕುಡಿಯುವ ನೀರು ಹಾಗು ಸ್ವಚ್ಚತೆ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ: ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಅಪ್ಸರ್ಪಾಷ ಹಾಗು ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಸಭೆಯಲ್ಲಿ ಚರ್ಚಿಸಬೇಕಿದ್ದ ೨೬ ಅಂಶಗಳ ಪೈಕಿ ೨೫ ಅಂಶಗಳನ್ನು ಚರ್ಚಿಸುವವರೆಗೂ ಸಭೆಯಲ್ಲಿದ್ದು ೨೬ ನೇ ಅಂಶವಾದ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ವಿಚಾರ ಬಂದಾಗ ಸದಸ್ಯರೆಲ್ಲಾ ಮೊದಲು ಊಟ ಮಾಡಿ ನಂತರ ಸಭೆ ಸೇರಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡೋಣ ಎಂದು ಹೇಳಿ ಸಭೆಯಿಂದ ಹೊರನಡೆದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕೆಲ ಸದಸ್ಯರು ಸಭೆಯಲ್ಲಿ ಚರ್ಚಿಸಲು ಉಳಿದಿರುವ ಕೊನೆಯ ಅಂಶವಿದು. ಹಾಗಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಿ ನಂತರ ಊಟಕ್ಕೆ ಹೋಗೋಣ ಎಂದರು. ಆದರೆ ಇದ್ಯಾವದಕ್ಕೂ ಮಣೆ ಹಾಕದ ಅಧ್ಯಕ್ಷರು ಹಾಗು ಅವರ ಬೆಂಬಲಿಗರು ಸಭೆಯಿಂದ ಹೊರ ಹೋದವರು ಮತ್ತೆ ಸಭೆಗೆ ಬರಲೇ ಇಲ್ಲ.
ಸಭೆಯಲ್ಲಿದ್ದ ಸುಮಾರು ೧೪ ಜನ ಸದಸ್ಯರು ಅಧ್ಯಕ್ಷ ಹಾಗು ಉಪಾಧ್ಯಕ್ಷರ ಗೈರು ಹಾಜರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸವಂತೆ ಆಯುಕ್ತ ಚಲಪತಿರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಯುಕ್ತ ಹಾಗು ನಗರಸಭೆ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.
ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಗೈರು ಹಾಜರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ನನಗಿಲ್ಲ. ಬದಲಿಗೆ ಸಭೆಯಲ್ಲಿ ಏನು ನಡೆದಿದೆ ಎನ್ನುವುದನ್ನು ಲಿಖಿತವಾಗಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಮೇಲಾಧಿಕಾರಿಗಳ ಆಧೇಶದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಹಾಗು ಸಿಬ್ಬಂದಿ ಹಾಜರಿದ್ದರು.
 

error: Content is protected !!