ನಗರಸಭೆಯ ಅವ್ಯವಸ್ಥೆಗಳು ಹಾಗೂ ಅಧಿಕಾರಿಗಳು ಮತ್ತು ಆಡಳಿತದ ಬಗ್ಗೆ ನಗರಸಭೆಯ ಸದಸ್ಯರೇ ಹತಾಶರಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷಾಂತರ ರೂಪಾಯಗಳನ್ನು ಖರ್ಚುಮಾಡಿ ದಿಬ್ಬೂರಹಳ್ಳಿ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ಮಾಡಿ ಸುಮಾರು ೩೦ರಿಂದ ೫೦ ದೀಪಗಳನ್ನು ಹಿಂದಿನ ಪುರಸಭೆಯ ಅವಧಿಯಲ್ಲಿ ಹಾಕಿಸಲಾಗಿತ್ತು . ಆದರೆ ಅದರ ನಿರ್ವಹಣೆಯನ್ನು ಈಗಿರುವ ನಗರ ಸಭೆಯು ಸರಿಯಾಗಿ ನಿರ್ವಯಿಸುತ್ತಿಲ್ಲ ಎಂದು ನಗರಸಭೆಯ ಸದಸ್ಯ ವೆಂಕಟಸ್ವಾಮಿ ಆರೋಪಿಸಿದ್ದಾರೆ.
ನಗರದ ಜನನಿಬಿಡ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಯಲು ಅನುಕೂಲವಾಗಲಿ, ಸಂಚಾರಕ್ಕೆ ಸಹಾಯಕವಾಗಲಿ ಎಂದು ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅದರ ಸೂಕ್ತ ನಿರ್ವಹಣೆಯಿಲ್ಲದೇ ಹಗಲಿನ ಹೊತ್ತು ಕೂಡ ಉರಿಯುತ್ತಲೇ ಇರುತ್ತದೆ. ಆದರೆ ನಗರ ಸಭೆಯ ಅಧಿಕಾರಿಗಳು ಸಂಬಳವನ್ನು ಪಡೆದು ಸಾರ್ವಜನಿಕ ಕೆಲಸಗಳನ್ನು ಮಾಡುತ್ತಿಲ್ಲ. ಪರಿಸರ ಅಧಿಕಾರಿಗಳು ಚರಂಡಿ, ನೀರಿನ ವ್ಯವಸ್ತೆ, ಬೀದಿ ದೀಪಗಳ ನಿರ್ವಹಣೆಯನ್ನು ಮಾಡದೇ ಇರುವುದಕ್ಕೆ ಕಸದ ರಾಶಿ ಮತ್ತು ಜೋಡಿ ರಸ್ತೆಯ ಬೀದಿ ದೀಪಗಳು ಹಾಡು ಹಗಲೇ ಉರಿಯುತ್ತಿರುವುದು ಸಾಕ್ಷಿಯಾಗಿದೆ ಎಂದರು.
ಬೆಸ್ಕಾಂ ಇಲಾಖೆಗೆ ಸಾವಿರಾರು ರೂಪಾಯಗಳು ನಗರ ಸಭೆಯಿಂದ ಕಟ್ಟಬೇಕಾಗುತ್ತದೆ. ಈ ಅವ್ಯವಸ್ಥೆಗಳಿಂದ ನಗರಸಭೆಯು ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಜನರ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ. ಇದಕ್ಕೆ ನಗರ ಸಭೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಿದ ಅವರು ಇದೇ ರೀತಿ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ ಮುಂದುವರೆದರೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.