ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ನಗರದ ಅಂದ ಚಂದವನ್ನು ಹೆಚ್ಚಿಲು ಚರಂಡಿ ಹಾಗೂ ರಸ್ತೆಗಳ ಸ್ವಚ್ಚತೆಗೆ ಆಧ್ಯತೆ ನೀಡುವ ಮೂಲಕ ಆರೋಗ್ಯವಂತ ಹಾಗೂ ಸುಂದರ ನಗರವನ್ನಾಗಿ ರೂಪಿಸಬೇಕೆಂದು ನೂತನ ನಗರ ಸಭೆ ಆಡಳಿತ ಮಂಡಳಿಗೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಮಂಗಳವಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಸೇರಿ ನೈರ್ಮಲ್ಯ ಕಾಪಾಡುವಲ್ಲಿ ಶ್ರಮಿಸಿದಾಗ ಮಾತ್ರ ನಗರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷ ಅಫ್ಸರ್್ ಪಾಷ ಮಾತನಾಡಿ ನಗರ ಸಭೆಯ ಆಡಳಿತ ಮಂಡಳಿಯ ಮೊದಲ ಆಧ್ಯತೆ ಸ್ವಚ್ಛತೆ ಎಂದು ತೀರ್ಮಾನಿಸಲಾಗಿದೆ. ಈ ದಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆವಿಗೂ ಸ್ವಚ್ಛತೆ ಕಾರ್ಯವನ್ನು ನಡೆಸುತ್ತಿದ್ದೇವೆ. ಸ್ವಚ್ಚತೆ ಕಾರ್ಯದಲ್ಲಿ ಪೌರ ಕಾರ್ಮಿಕರು, ನಗರಸಭೆ ಆಡಳಿತ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮಿಸುತ್ತಿದ್ದಾರೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭೆ ಉಪಾದ್ಯಕ್ಷೆ ಪ್ರಭಾವತಿಸುರೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಂದ ಕಿಷನ್, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ರಾಘವೇಂದ್ರ, ಸಿಕಂದರ್, ಸಂದ್ಯಾಮಂಜುನಾಥ್, ಸರಳಶ್ರೀಧರ್, ಜಬೀವುಲ್ಲಾ, ಮಂಜುನಾಥ್, ಸುಮಿತ್ರರಮೇಶ್್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.