Home News ನರೇಗಾ ಯೋಜನೆಯಡಿ ಕಳಪೆ ಕಾಮಗಾರಿ, ಕ್ರಮಕ್ಕೆ ಆಗ್ರಹ

ನರೇಗಾ ಯೋಜನೆಯಡಿ ಕಳಪೆ ಕಾಮಗಾರಿ, ಕ್ರಮಕ್ಕೆ ಆಗ್ರಹ

0

ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಮೇಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ವೆಂಕಟರೆಡ್ಡಿ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಬಶೆಟ್ಟಹಳ್ಳಿ -ಧನಮಿಟ್ಟೇನಹಳ್ಳಿ ಕೆರೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಗ್ರಾಮದ ಮುನಿರಾಜು ಎಂಬುವವರು ಮೋರಿ ನಿರ್ಮಿಸಲು ಮುಂದಾಗಿದ್ದಾರೆ. ಆದರೆ ಮೋರಿ ಕಾಮಗಾರಿಗೆ ಹೊಸ ಕಲ್ಲು ಹಾಕುವ ಬದಲಿಗೆ ಸಮೀಪದಲ್ಲಿರುವ ಗ್ರಾಮದ ಹಳೆಯ ಬಾವಿಯ ಕಲ್ಲು ಕಟ್ಟಡ ಕೆಡವಿ ಅದರ ಹಳೇ ಕಲ್ಲುಗಳನ್ನು ಬಳಸಿ ಮೋರಿ ನಿರ್ಮಿಸಲು ಮುಂದಾಗಿದ್ದಾರೆ.

ಧನಮಿಟ್ಟೇನಹಳ್ಳಿ ಕೆರೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಿಸುತ್ತಿರುವ ಮೋರಿ ಕಾಮಗಾರಿಗಾಗಿ ಗ್ರಾಮದ ಸಾರ್ವಜನಿಕ ಬಾವಿಯ ಕಲ್ಲುಗಳನ್ನು ಕಿತ್ತಿರುವುದು

ಸಾರ್ವಜನಿಕ ಸ್ವತ್ತಾದ ಪುರಾತನ ಕಲ್ಲುಕಟ್ಟಡದ ಬಾವಿಯನ್ನು ಕೆಡವಿರುವುದಲ್ಲದೆ, ಮೋರಿ ಕಾಮಗಾರಿಗೆ ಬೇಕಾದ ಮರಳು, ಸಿಮೆಂಟ್ ಸಹ ಸಮರ್ಪಕವಾಗಿ ಬಳಸದೇ ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣ ಲಪಟಾಯಿಸಲು ಯತ್ನಿಸಿರುವ ವ್ಯಕ್ತಿಗೆ ನರೇಗಾ ಯೋಜನೆಯಡಿ ಯಾವುದೇ ಬಿಲ್ ಮಾಡಬಾರದು. ಸರ್ಕಾರಿ ಹಣ ದುರುಪಯೋಗ ಮಾಡಿಕೊಳ್ಳಲು ಯತ್ನಿಸಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಮನವಿ ಸಲ್ಲಿಸಿದ್ದು ತಾಲ್ಲೂಕು ಪಂಚಾಯಿತಿ ಇಓ ಹಾಗೂ ನರೇಗಾ ಯೋಜನೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ಗ್ರಾಮದ ಕೆರೆಯಲ್ಲಿ ನಡೆದಿರುವ ಮೋರಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈ ಕಾಮಗಾರಿಯ ಪೈಕಿ ಕೇವಲ ೩೦ ಸಾವಿರ ಹಣ ಮಾತ್ರ ಸಂದಾಯವಾಗಿದೆ. ಉಳಿದ ಸುಮಾರು ೧ ಲಕ್ಷ ೭೦ ಸಾವಿರದಷ್ಟು ಹಣ ಈವರೆಗೂ ಡ್ರಾ ಮಾಡಿಲ್ಲ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡಲಾಗುವುದಿಲ್ಲ. ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಜರುಗಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಅಶೋಕ್‌ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಆರ್.ನಾರಾಯಣಸ್ವಾಮಿ, ಮುನಿವೆಂಕಟರಾಯಪ್ಪ, ಎಂ.ಎನ್.ಬೈರಪ್ಪ, ಡಿ.ಸಿ.ಸುರೇಶ್, ಜಯರಾಮರೆಡ್ಡಿ, ದೊಡ್ಡಲಕ್ಷ್ಮಯ್ಯ, ಬೈರಾರೆಡ್ಡಿ ಹಾಜರಿದ್ದರು.

error: Content is protected !!