Home News ನರೇಗಾ ಯೋಜನೆ ಮುಖಾಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ

ನರೇಗಾ ಯೋಜನೆ ಮುಖಾಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ

0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನರೇಗಾ ಯೋಜನೆ ಮುಖಾಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಲು ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಮುನೇಗೌಡ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯತಿಯ ಆವರಣದಲ್ಲಿ ಮಂಗಳವಾರ ನಡೆದ ಗ್ರಾಮಸಭೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ನರೇಗಾ ಯೋಜನೆಯ ಮುಖಾಂತರ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಉತ್ತಮವಾದ ಅವಕಾಶಗಳಿದ್ದು, ಪ್ರತಿಯೊಂದು ಹಳ್ಳಿಗೂ ಮೂಲಸೌಕರ್ಯಗಳಾದ ಕುಡಿಯುವ ನೀರು, ಚರಂಡಿಗಳು, ಬೀದಿದೀಪಗಳು, ಹಾಗೂ ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಬಹುದು. ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಯ ಜನರು ಮರಗಳನ್ನು ಬೆಳೆಸುವ ಮೂಲಕ ವಾತಾವರಣ, ಹಾಗೂ ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ಯಾರೊಬ್ಬ ಸದಸ್ಯರೂ ರಾಜಕೀಯ ಮಾಡಬಾರದು. ಗ್ರಾಮ ಪಂಚಾಯತಿಗಳಲ್ಲಿ ತಯಾರಿಸುವಂತಹ ಕ್ರೀಯಾಯೋಜನೆಗಳು, ಪಾರದರ್ಶಕವಾಗಿರಬೇಕು. ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳುವನಹಳ್ಳಿ ರಸ್ತೆಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ರಘುನಾಥ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಬೈರಸಂದ್ರ, ಹಾಗೂ ಮಿತ್ತನಹಳ್ಳಿ ಗ್ರಾಮಗಳಲ್ಲಿ ಶೇ ೧೦೦ ರಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಪ್ರಶಂಸೆಗೆ ಒಳಗಾಗಿದ್ದು, ಉಳಿದ ಎಲ್ಲಾ ಹಳ್ಳಿಗಳಲ್ಲಿಯೂ ಕೂಡಾ ಇದೇ ರೀತಿಯ ಸಹಕಾರ ನೀಡಬೇಕು.
ಕೃಷಿ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ, ರೇಷ್ಮೆ ಇಲಾಖೆ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಇಲಾಖೆಗಳಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಂದ್ರೇಗೌಡ, ಎಇಇ ಗಣಪತಿಸಾಕರೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವೇಗೌಡ, ಪಿ.ಡಿ.ಓ. ಕಾತ್ಯಾಯಿನಿ, ಸೆಂಟ್ರಲ್ ಬ್ಯಾಂಕ್ನ ವ್ಯವಸ್ಥಾಪಕ ಶಿವಕುಮಾರ್, ನರೇಗಾ ಇಂಜಿನಿಯರ್ ಆಂಜನೇಯ, ವೈದ್ಯಾಧಿಕಾರಿ ಡಾ.ಅಂಬಿಕಾ, ಅಬಕಾರಿ ಇಲಾಖೆಯ ಅಧಿಕಾರಿ ರಾಮಕೃಷ್ಣ, ಶ್ರೀನಿವಾಸಗೌಡ, ಸದಸ್ಯರಾದ ನರಸಿಂಹಮೂರ್ತಿ,ಹರೀಶ್, ಪದ್ಮಮ್ಮ, ಸಿ.ವಿ.ನಾರಾಯಣಸ್ವಾಮಿ, ಸುಗುಣಮ್ಮ, ಶ್ರೀನಿವಾಸ್, ಭಾಗ್ಯಮ್ಮ, ಗೋಪಾಲರಾವ್, ತಾಲ್ಲೂಕು ಸಾಕ್ಷರತಾ ಸಂಯೋಜಕ ಶ್ರೀನಿವಾಸ್, ದ್ಯಾವಪ್ಪ, ಮಂಜುಳಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!