Home News ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ

ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ

0

ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ನವೆಂಬರ್ ೧೦ ರಂದು ಟಿಪ್ಪು ಜಯಂತಿ ನಡೆಸಲಿದ್ದು, ಎಲ್ಲ ಸಂಘ ಸಂಸ್ಥೆಗಳು, ಸಮುದಾಯದವರು ಜಯಂತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಮನವಿ ಮಾಡಿದರು.
ತಾಲ್ಲೂಕು ಆಡಳಿತದ ವತಿಯಿಂದ ಟಿಪ್ಪು ಜಯಂತಿ ಆಚರಣೆಯ ಹಿನ್ನಲೆಯಲ್ಲಿ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಟಿಪ್ಪು ಜಯಂತಿಯನ್ನು ಆಚರಿಸಲಾಗುವುದು. ಜಯಂತಿ ಅಂಗವಾಗಿ ಯಾವುದೇ ರೀತಿಯ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದ್ದು, ಸಮುದಾಯದವರು ಸಹಕಾರ ನೀಡಬೇಕು ಎಂದರು.
ಈಗಾಗಲೇ ರಾಜ್ಯಾದ್ಯತ ಪ್ಲಾಸ್ಟಿಕ್ ನಿಷೇಧವಿರುವುದರಿಂದ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟುವಂತಿಲ್ಲ. ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭಿಸಿ ನಿಗಧಿತ ಸಮಯದೊಳಗೆ ಮುಗಿಸಲು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿದ್ದ ಮುಸ್ಲೀಂ ಮುಖಂಡರು ಮಾತನಾಡಿ, ವೇದಿಕೆ ಕಾರ್ಯಕ್ರಮವನ್ನು ಮದ್ಯಾಹ್ನ ೨ ಗಂಟೆಗೆ ನಿಗಧಿ ಮಾಡಿ ಎಂದು ಸಲಹೆ ನೀಡಿದರು. ಆಗ ತಹಶೀಲ್ದಾರ್, ಸರ್ಕಾರ ಹಾಗೂ ಜಿಲ್ಲಾಡಳಿತದ ತೀರ್ಮಾನದಂತೆ ಮದ್ಯಾಹ್ನ ೨ ಗಂಟೆಯೊಳಗೆ ಕಾರ್ಯಕ್ರಮ ಮುಗಿಯಬೇಕು. ಹಾಗಾಗಿ ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭಿಸಲಾಗುವುದು ಸಹಕರಿಸಿ ಎಂದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಕಟ್ಟುವುದನ್ನು ನಿಷೇಧಿಸಲಾಗಿದೆ. ಶನಿವಾರ ನಿಗಧಿತ ಸಮಯಕ್ಕೆ ಸಮುದಾಯದವರೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡು ಜಯಂತಿಯನ್ನು ಶಾಂತಿ ಹಾಗು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿ ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್‌ಕುಮಾರ್ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಸರ್ಕಾರ ವಿಧಿಸಿರುವ ನೀತಿ ನಿಯಮಗಳನ್ನು ಎಲ್ಲರೂ ಒಪ್ಪಿಕೊಂಡು ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ನಗರಠಾಣೆ ಪಿಎಸ್ಸೈ ಲಿಯಾಖತ್, ಸಮುದಾಯದ ಮುಖಂಡರಾದ ಮೇಲೂರು ಅಜೀಜ್, ಹೈದರಾಲಿ, ಅಕ್ರಮ್‌ಪಾಷ, ಮೌಲಾ, ಅಸಾದ್ ಹಾಜರಿದ್ದರು.

error: Content is protected !!