Home News ನಾಡಪ್ರಭು ಕೆಂಪೇಗೌಡರು ಸರ್ವಮಾನ್ಯರು

ನಾಡಪ್ರಭು ಕೆಂಪೇಗೌಡರು ಸರ್ವಮಾನ್ಯರು

0

ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರನ್ನು ಯಾವುದೇ ಒಂದು ಸಮಾದಾಯಕ್ಕೆ ಸೀಮಿತಗೊಳಿಸದೇ ಎಲ್ಲರೂ ಗೌರವಿಸುವಂತಹ ಕೆಲಸವಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಣ್ಣಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ ವಿವಿಧ ಸಮುದಾಯದವರಿಗೆ ಅವರದೇ ಆದಂತಹ ಪೇಟೆಗಳನ್ನು ನಿರ್ಮಿಸಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಮಾಜದ ಎಲ್ಲಾ ವರ್ಗಗಳ ಪ್ರೀತಿಗಳಿಸಿದ್ದವರು ನಾಡಪ್ರಭು ಕೆಂಪೇಗೌಡರು. ಮುಂದಿನ ಪೀಳಿಗೆಗಾಗಿ ಸಾವಿರಾರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸುವ ಮೂಲಕ ಅವರು ಮಾದರಿಯಾಗಿದ್ದಾರೆ ಎಂದರು.
ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ ಉಳಿದಂತೆ ಗ್ರಾಮದ ಅಭಿವೃದ್ದಿ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೇ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು ಎಂದರು.
ವೈದ್ಯಾಧಿಕಾರಿ ಡಾ.ಡಿ.ಕೆ.ರಮೇಶ್ ಮಾತನಾಡಿ, ಯಾವುದೇ ಒಂದು ಜಾತಿಯಿಂದ ಅಥವ ಒಂದು ಕಸುಬಿನಿಂದ ಈ ಸಮಾಜ ಉದ್ದಾರವಾಗಲ್ಲ ಬದಲಿಗೆ ಎಲ್ಲಾ ಸಮುದಾಯಗಳ ಎಲ್ಲಾ ಕಸುಬಿಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೆರೆ, ಕುಂಟೆ, ಕಲ್ಯಾಣಿಗಳಿಂದ ಬರೀ ವಕ್ಕಲಿಗರು ಮಾತ್ರ ನೀರು ಬಳಸಲಿಲ್ಲ ಎಂದ ಅವರು ಎಲ್ಲಾ ವರ್ಗದ ಜನರು ಸಾಮರಸ್ಯವಾಗಿ ಜೀವಿಸುವ ಮೂಲಕ ಉತ್ತಮ ಸಮಾಜ ನಿರ್ಮಣಕ್ಕೆ ಅಡಿಪಾಯ ಹಾಕಿಕೊಟ್ಟಂತಹ ಇಂತಹ ಮಹಾನುಭಾವರನ್ನು ಎಲ್ಲರೂ ಸ್ಮರಿಸುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಗಣ್ಯರಿಂದ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಎಂ.ಎಲ್.ಸತೀಶ್, ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಒಕ್ಕಲಿಗ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ನಗರ ಘಟಕದ ಅಧ್ಯಕ್ಷ ಪುರುಷೋತ್ತಮ್, ಗ್ರಾಮ ಪಂಚಾಯ್ತಿ ಸದಸ್ಯ ವಿ.ಮನೋಹರ್, ದೊಣ್ಣಹಳ್ಳಿ ಯುವಕರ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ವೆಂಕಟೇಶ್ಮೂರ್ತಿ, ರೈತ ಸಂಘದ ತಾದೂರು ಮಂಜುನಾಥ್, ದೊಣ್ಣಹಳ್ಳಿ ಒಕ್ಕಲಿಗರ ಸಂಘದ ಡಿ.ಕೆ.ಕೆಂಪೇಗೌಡ, ರಮೇಶ, ಡಿ.ವಿ.ಚನ್ನಕೃಷ್ಣಪ್ಪ, ಡಿ.ಆರ್.ನಾರಾಯಣರೆಡ್ಡಿ ಹಾಗು ಇತರ ಪದಾಧಿಕಾರಿಗಳು ಹಾಜರಿದ್ದರು.
 

error: Content is protected !!