Home News ನಾಡು, ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ

ನಾಡು, ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ

0

ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವಾಗಿದ್ದು ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ಮಾತೃ ಭಾಷೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ೬೨ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಹಾಗು ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಬಹಳ ಪುರಾತನವಾದ ಹಿನ್ನೆಲೆಯಿದೆ, ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ.
ನೆರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೆ ವ್ಯವಹರಿಸಬೇಕಾಗುತ್ತದೆ ಎಂದ ಅವರು ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡವನ್ನು ನಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ನಾವು ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ಸ್ತಬ್ದ ಚಿತ್ರಗಳು ಸೇರಿದಂತೆ ವೇಷಭೂಷಣಗಳು, ಜಾನಪದ ಕಲಾ ಪ್ರದರ್ಶನ, ಮಂಗಳ ವಾದ್ಯಗಳೊಡನೆ ಭುವನೇಶ್ವರಿಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ತಾಲ್ಲೂಕಿನ ವಿವಿದೆಡೆಯಿಂದ ಬಂದಿದ್ದ ಅಲಂಕೃತವಾದ ಟ್ರಾಕ್ಟರ್ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವೀರಗಾಸೆ, ಗಾರುಡಿಗೊಂಬೆ ಮುಂತಾದ ಕಲಾತಂಡಗಳು ತಮಟೆ ನಾದದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಲಕ್ಷ್ಮಿನಾರಾಯಣ, ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
 

error: Content is protected !!