Home News ನೀರು ಬರುವವರೆಗೂ ಹೋರಾಟ ಮಾಡೋಣ – ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ

ನೀರು ಬರುವವರೆಗೂ ಹೋರಾಟ ಮಾಡೋಣ – ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ

0

‘ಜೈಲಿಗೆ ಹೋಗಲು ತಯಾರಿರುವ ಹತ್ತು ಸಾವಿರ ಸತ್ಯಾಗ್ರಹಿಗಳನ್ನು ತಯಾರು ಮಾಡಿ, ನಾನೂ ಜೊತೆಗೂಡುತ್ತೇನೆ. ಸರ್ಕಾರದ ಮೇಲೆ ಒತ್ತಡ ತರೋಣ. ಬಯಲುಸೀಮೆಗೆ ನೀರು ಬರುವವರೆಗೂ ಹೋರಾಟ ಮಾಡೋಣ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಆಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಬುಧವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ರೈತರ ಜಲ ಜಾಗೃತಿ ಸಭೆಗೆ ಆಗಮಿಸಿದ್ದ ಅವರು ಮಾತನಾಡಿದರು.
ಶಾಸನ ಸಭೆಯಲ್ಲಿ ಯಾವೊಬ್ಬ ಶಾಸಕರೂ ನೀರಿನ ಕುರಿತಂತೆ ಚಕಾರವೆತ್ತದಿರುವುದು ದುರದೃಷ್ಟಕರ. ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ದೊಡ್ಡದಿದೆ. ಜನರಿಂದ ಆಯ್ಕೆಯಾದವರು ಜನರ ಅತ್ಯಗತ್ಯ ನೀರಿನ ಕುರಿತಂತೆ ಉಪೇಕ್ಷೆ ಮಾಡಬಾರದು. ಅದು ಸರ್ಕಾರಕ್ಕೂ ಮತ್ತು ಆಯ್ಕೆಯಾದ ಶಾಸಕರಿಗೂ ಶೋಭೆಯಲ್ಲ. ಚುನಾವಣೆಗೆ ಮುಂಚೆ ಆಶ್ವಾಸನೆ ನೀಡಿದ್ದವರು ನಂತರ ಅದರ ಬಗ್ಗೆ ಚಿಂತನೆ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಿರುವ ಎತ್ತಿನಹೊಳೆ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. ನಮ್ಮ ಜಿಲ್ಲೆಗಳು ಕೆರೆಗಳಿಂದ ಕೂಡಿದ್ದು, ನಮ್ಮ ಹೋರಾಟದ ಉದ್ದೇಶ ಕೆರೆಗಳನ್ನು ತುಂಬಿಸುವ ನೀರನ್ನು ತರಿಸುವುದಾಗಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಜನಜಾಗೃತಿ ಮೂಡಿಸಿ ಹತ್ತು ಸಾವಿರ ಮಂದಿ ಸತ್ಯಾಗ್ರಹಿಗಳ ಮೂಲಕ ಸರ್ಕಾರಕ್ಕೆ ಹದಿನೈದು ದಿನಗಳೊಳಗೆ ತ್ವರಿತ ಗತಿಯಲ್ಲಿ ಕೆಲಸ ಮಾಡುವಂತೆ ಒತ್ತಾಯಿಸೋಣ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಕಾರ್ಯದರ್ಶಿ ಯಲುವಳ್ಳಿ ಸೊಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಮಳ್ಳೂರು ಹರೀಶ್‌, ಭಕ್ತರಹಳ್ಳಿ ಬೈರೇಗೌಡ, ಸದಸ್ಯರಾದ ಮಂಚನಬಲೆ ಶ್ರೀನಿವಾಸ್‌, ಲಕ್ಷ್ಮಯ್ಯ, ಶ್ರೀನಿವಾಸ್‌, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ ರೆಡ್ಡಿ, ಛಲಪತಿ, ಸುಶ್ಮಾ ಶ್ರೀನಿವಾಸ್‌, ಕೆಂಪರೆಡ್ಡಿ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ದೇವರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.