ನಗರದ ಹಿರಿಯ ವಕೀಲ ಹಾಗೂ ನೋಟರಿ ಬಿ.ನೌಷಾದ್ ಅಲೀ ಮತ್ತು ನಿವೃತ್ತ ಎ.ಸಿ.ಡಿ.ಪಿ.ಒ ಎಸ್.ಕೆ.ತಾಜುನ್ನಿಸಾ ದಂಪತಿಯ ಪುತ್ರಿ ಎನ್.ಚಾಂದಿನಿ ಅವರು ನ್ಯಾಯಾಧೀಶರಾಗಿರುವುದಕ್ಕೆ ಅವರನ್ನು ಬುಧವಾರ ಕನ್ನಡ ಸಾರಸ್ವತ ಪರಿಚಾರಿಕೆ (ಕ.ಸಾ.ಪ) ವತಿಯಿಂದ ಗೌರವಿಸಿ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿದರು.
ತಾಲ್ಲೂಕಿನ ಹೆಣ್ಣುಮಗಳು ಪ್ರಪ್ರಥಮ ಬಾರಿಗೆ ನ್ಯಾಯಾಧೀಶರಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೆಣ್ಣುಮಕ್ಕಳು ಓದಿ ಸಾಧಕರಾಗಲು ಪ್ರೇರಣೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಎನ್.ಚಾಂದಿನಿ ಅವರು ಎರಡು ವರ್ಷಗಳ ಹಿಂದೆ ಮಾಸ್ಟರ್ ಆಫ್ ಲಾ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದರು, ಈಗ ಪಿ.ಎಚ್.ಡಿ ಮಾಡುತ್ತಾ ಇರುವಾಗಲೇ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಾಧೀಶರಾಗಿದ್ದಾರೆ. ಸೆಪ್ಟೆಂಬರ್ ೧೬ ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಾಧಕರನ್ನು ಗೌರವಿಸುವ ಉದ್ದೇಶ ಅವರ ಸಾಧನೆ ಇತತರಿಗೆ ಪ್ರೇರಣೆಯಾಗಲಿ ಎಂಬುದಾಗಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ರೀತಿಯ ಸಾಧಕರು ಇನ್ನಷ್ಟು ಮಂದಿ ಹೊರಬರಬೇಕು. ಈ ರೀತಿಯ ಸಾಧಕರ ಜ್ಞಾನ ನಮ್ಮ ತಾಲ್ಲೂಕಿಗೆ ಉಪಯುಕ್ತವಾಗಲಿ, ಪ್ರೇರಣಾದಾಯಕವಾಗಲಿ ಎಂದು ಹೇಳಿದರು.
ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ ಮಾತನಾಡಿ, ನಮ್ಮ ಮುಸ್ಲಿಂ ಜನಾಂಗದಲ್ಲಿ ಹೆಣ್ಣುಮಕ್ಕಳನ್ನು ಓದಿಸಲು ನಾನಾ ಅಡೆತಡೆಗಳಿವೆ. ಅವೆಲ್ಲವನ್ನೂ ಮೀರಿ ಎನ್.ಚಾಂದಿನಿ ಅವರು ಅಪ್ರತಿಮ ಸಾಧನೆ ಮಾಡಿದ್ದಾರೆ. ಓದುವ ಹೆಣ್ಣುಮಕ್ಕಳೆಲ್ಲರೂ ಇವರಿಂದ ಪ್ರೇರಣೆ ಹೊಂದಬೇಕು. ಪೋಷಕರು ಹೆಣ್ಣುಮಕ್ಕಳ ಓದಿಗೆ ಉತ್ತೇಜನ ಕೊಟ್ಟರೆ ಈ ರೀತಿ ಸಾಧಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾರಸ್ವತ ಪರಿಚಾರಿಕೆ (ಕ.ಸಾ.ಪ) ವತಿಯಿಂದ ಪುಸ್ತಕವನ್ನು ನೀಡಿ ಎನ್.ಚಾಂದಿನಿ ಅವರನ್ನು ಗೌರವಿಸಲಾಯಿತು.
ವಕೀಲರಾದ ಬಿ.ನೌಷಾದ್ ಅಲೀ, ಎಸ್.ಕೆ.ತಾಜುನ್ನಿಸಾ ಎಸ್.ಸತೀಶ್, ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿ ಬಿ.ನೌತಾಜ್, ಬೆಳ್ಳೂಟಿ ರಮೇಶ್, ವಾಲಿಬಾಲ್ ಕ್ರೀಡಾಪಟು ಮಧು ಹಾಜರಿದ್ದರು.