ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹಿತರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ವಿವಿಧ ಇಲಾಖೆಗಳ ಮೂಲಕ ಕೈಗೊಂಡಿದೆ. ತಾಲ್ಲೂಕಿನ ವಿವಿಧ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆಯನ್ನು ಆಯೋಜಿಸಿರುವುದಾಗಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಮತ್ತು ಬೇಡಿಕೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯನ್ನು ಕಾಟಾಚಾರಕ್ಕೆ ನಡೆಸುವುದಿಲ್ಲ. ಪ್ರತಿಯೊಂದು ಸಮಸ್ಯೆ ಹಾಗೂ ತೊಂದರೆಗಳನ್ನು ದಾಖಲು ಮಾಡಿಕೊಂಡು ಅವುಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದಾರೆ. ಅವರವರ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.
ಸಭೆಯಲ್ಲಿ ಅಂಬೇಡ್ಕರ್ ಭವನಕ್ಕೆ ಬೇಕಿರುವ ಸ್ಥಳ, ಗುಣಮಟ್ಟವಿಲ್ಲದ ರಸ್ತೆ ಕಾಮಗಾರಿಗಳು, ಗ್ರಾಮಗಳಲ್ಲಿ ನಿಲ್ಲದ ಮದ್ಯ ಮಾರಾಟ, ಅಡುಗೆಯವರನ್ನು ನೇಮಕ ಮಾಡಿಕೊಂಡಿಲ್ಲದ ಶಾಲೆಗಳ ವಿರುದ್ಫ ಕ್ರಮ, ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಸದ್ಭಳಕೆಯಾಗದ ಸರ್ಕಾರದ ಅನುದಾನಗಳು, ದಲಿತ ಕಾಲೋನಿಗಳಲ್ಲಿನ ಸಮಸ್ಯೆಗಳು, ನಿವೇಶನ ರಹಿತರಿಗೆ ನಿವೇಶನ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು ವಿವರಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಕ್ಷ್ಮೀನಾರಾಯಣರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಅನುಸೂಯಾದೇವಿ, ಸಿಡಿಪಿಒ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು, ಸಬ್ ಇನ್ಸ್ ಪೆಕ್ಟರ್ ಗಳಾದ ನವೀನ್ ರೆಡ್ಡಿ, ಪ್ರದೀಪ್ ಪೂಜಾರಿ, ವಿಜಯ್ ರೆಡ್ಡಿ, ಮುಖಂಡರಾದ ವೆಂಕಟೇಶ್, ಅರುಣ್ ಕುಮಾರ್, ಕೃಷ್ಣಪ್ಪ, ಮುನಿರಾಜು, ಮುನೀಂದ್ರ, ದ್ಯಾವಪ್ಪ, ಪ್ರಕಾಶ್, ದ್ಯಾವಕೃಷ್ಣಪ್ಪ ಹಾಜರಿದ್ದರು.