ತಾಲ್ಲೂಕಿನಲ್ಲಿ ಈ ಬಾರಿ ಸೊಗಡಿನ ಅವರೆಕಾಯಿಯ ಘಮಲು ಎಲ್ಲೆಡೆ ಹಬ್ಬಿದ್ದು, ಅವರೆ ಪ್ರಿಯರಿಗೆ ಈ ಬಾರಿ ಉತ್ತಮ ಅವರೆ ಕಾಯಿ ಸಿಗಲಿದೆ.
ಇನ್ನು ಎರಡು ವಾರಗಳಲ್ಲಿ ಮಾರುಕಟ್ಟೆಯ ತುಂಬಾ ಅವರೆಯು ಕಾಣಸಿಗಲಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಫಸಲು ಉತ್ತಮವಾಗಿದ್ದು, ಕಡಿಮೆ ದರದಲ್ಲಿ ಸಿಗುವ ಅವಕಾಶವಿದೆ.
ಹಿಂದಿನ ವರ್ಷ ಅವರೆ ಬೆಳೆ ಕಡಿಮೆ ಇದ್ದುದರಿಂದ ಬೇಡಿಕೆ ಇತ್ತು, ಆದರೆ ಈ ಬಾರಿ ಬೇಡಿಕೆ ಕುಸಿಯಲಿದೆ ಎಂಬುದು ವ್ಯಾಪಾರಿಗಳ ಆಲೋಚನೆಯಾದರೆ, ಸೊಗಡಿನ ಅವರೆ ಪ್ರಿಯರಿಗೆ ಗುಣಮಟ್ಟದ ಅವರೆ ಸಿಗುವ ಸಂತಸವಿದೆ.

ತಾಲ್ಲೂಕಿನ ಕೆಲ ಭಾಗಗಳಲ್ಲಿ ಅವರೆಕಾಯಿ ಬಲಿಯುವ ಹಂತದಲ್ಲಿದ್ದರೆ, ಇನ್ನು ಕೆಲವೆಡೆ ಹೂ, ಕಾಯಿ ಕಟ್ಟಿಕೊಂಡು ಗಿಡಗಳು ಸಂಪುಷ್ಟಿಯಾಗಿವೆ. ಸೊಗಡಿನ ಮಣಿ ಅವರೆಗೆ ಬೇಡಿಕೆ ಹೆಚ್ಚು. ಅದರ ರುಚಿಯನ್ನು ಕಂಡುಕೊಂಡವರಿಗೆ ಅದುವೇ ಬೇಕು. ಆದ್ದರಿಂದಲೇ ಸೊಗಡಿನ ಅವರೆಗೆ ಬೇಡಿಕೆ ಹೆಚ್ಚು.
ಸಂಕ್ರಾಂತಿಯವರೆಗೂ ಇನ್ನು ಅವರೆ ಕಾಯಿಯದೇ ಸುಗ್ಗಿಯಿರುತ್ತದೆ. ಹಿರಿಯರ ಪ್ರಕಾರ ಇಬ್ಬನಿ ಬೀಳುವುದು, ಮಂಜಿನ ವಾತಾವರಣ ಅವರೆಯ ಸೊಗಡನ್ನು ಹೆಚ್ಚಿಸುತ್ತದೆ. ತಾಲ್ಲೂಕಿನ ಉತ್ತಮ ಸೊಗಡಿನ ಅವರೆಕಾಯಿ ಅವರೆ ಮೇಳದಲ್ಲೂ ಭಾಗವಹಿಸುತ್ತದೆ. ತಾಲ್ಲೂಕಿನ ಅವರೆಗೆ ಸುತ್ತಲಿನ ತಾಲ್ಲೂಕುಗಳು, ನೆರೆಯ ರಾಜ್ಯಗಳ ವ್ಯಾಪಾರಸ್ಥರು ಖರೀದಿಸುತ್ತಾರೆ.
‘ಅರ್ಧ ಎಕರೆಗೆ ನಾಟಿ ಅವರೆ ಬೆಳೆದಿದ್ದೇವೆ. ಉತ್ತಮ ಮಳೆಯಾದ ಕಾರಣ ಈ ಬಾರಿ ಒಳ್ಳೆಯ ಅವರೆ ಬೆಳೆಯಾಗಿದೆ. ಸುಮಾರು 600 ಕೆಜಿ ಸಿಗುವ ನಿರೀಕ್ಷೆಯಿದೆ. ಮುಂಜಾನೆಯ ವಾತಾವರಣ ಸಹ ಬೆಳೆಗೆ ಪೂರಕವಾಗಿದೆ. ಎಲ್ಲೆಡೆ ಬೆಳೆ ಬಂದು ಬೆಲೆ ಕುಸಿತ ಕಾಣಬಹುದಾದರೂ, ಗುಣಮಟ್ಟದ ಅವರೆಗೆ ಬೇಡಿಕೆ ಕುಸಿಯದು’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್.