ಗ್ರಾಮದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ತೆರಳಿದ ಪೊಲೀಸ್ ಪೇದೆಯೊಬ್ಬರ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಲ್ಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಗೋವಿಂದ ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ಅಬ್ಲೂಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿಯನ್ನು ಪೊಲೀಸರು ಬಂದಿಸಿದ್ದಾರೆ.
ಘಟನೆಯ ವಿವರ :
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತಹಳ್ಳಿ ಗ್ರಾಮದ ಅಶ್ವತ್ಥಕಟ್ಟೆ ಬಳಿ ಗ್ರಾಮದ ಕೆಲವರು ಹುಣಸೇಬೀಜ (ಚೌಕಭಾರ) ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ತಾತಹಳ್ಳಿ ಗ್ರಾಮಕ್ಕೆ ಮಫ್ತಿಯಲ್ಲಿ ಹೊರಟ ಪೊಲೀಸರ ತಂಡ ಏಕಾ ಏಕಿ ದಾಳಿ ನಡೆಸಿದಾಗ ಆಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವರು ಸಮೀಪದಲ್ಲಿ ಇದ್ದ ಅಂಗಡಿಯ ಬಳಿ ಇದ್ದುದನ್ನು ಕಂಡ ಪೊಲೀಸರು ಗದರಿಸಿದಾಗ ಸ್ಥಳದಲ್ಲಿದ್ದ ಸ್ಥಳೀಯ ಯುವಕರು ಹಾಗು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ನಾರಾಯಣಸ್ವಾಮಿ ಹಾಗು ಪೇದೆ ಗೋವಿಂದರ ನಡುವೆ ಮಾತುಗಳು ಬೆಳೆದು ನಾರಾಯಣಸ್ವಾಮಿ ಪೇದೆ ಗೋವಿಂದನ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಪೇದೆ ಗೋವಿಂದ ಠಾಣೆಗೆ ಬಂದು ನಡೆದ ಘಟನೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದಾಗ ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರದೀಪ್ ಪೂಜಾರಿ ಹಾಗು ತಂಡ ಗ್ರಾಮಕ್ಕೆ ಭೇಟಿ ನೀಡಿ ಹಲ್ಲೆ ನಡೆಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿಯನ್ನು ಬಂದಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.