Home News ಪೋಡಿ ಮುಕ್ತ ಅಭಿಯಾನ

ಪೋಡಿ ಮುಕ್ತ ಅಭಿಯಾನ

0

ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿಸಲು ಪೋಡಿಮುಕ್ತ ಗ್ರಾಮ ಅಭಿಯಾನ ಸಹಕಾರಿಯಾಗಲಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಗುರುವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಪೋಡಿ ಮುಕ್ತ ಅಭಿಯಾನದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಪೋಡಿ ಮುಕ್ತ ಅಭಿಯಾನದ ಅಡಿಯಲ್ಲಿ ಭೂಮಾಪಕರು ಗ್ರಾಮದಲ್ಲಿ ಅಳತೆ ಕೆಲಸ ಕೈಗೊಳ್ಳಲು ಬಂದಾಗ ಅಗತ್ಯ ಮಾಹಿತಿ, ಸಹಕಾರ ನೀಡಿ, ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಭೂಮಾಪನ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಳತೆಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಭೂದಾಖಲೆ ಉಪನಿರ್ದೇಶಕ (ಡಿಡಿಎಲ್ಆರ್) ಅಜ್ಜಪ್ಪ ಮಾತನಾಡಿ ನಾಗರಿಕರು ವರ್ಷದುದ್ದಕ್ಕೂ ತಾಲ್ಲೂಕು ಕಚೇರಿಗೆ ಸುತ್ತುವ ಬದಲಿಗೆ ಅಭಿಯಾನದ ಮೂಲಕ ತಮ್ಮ ಗ್ರಾಮಕ್ಕೆ ಭೂಮಾಪನ ತಂಡ ಭೇಟಿ ನೀಡಿದಾಗ ಅಗತ್ಯ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಗತ್ಯ ಮಾಹಿತಿ ನೀಡಿ ಅಳತೆಗೆ ಸಹಕರಿಸಬೇಕು. ಈ ಮೂಲಕ ಭೂ ದಾಖಲೆ ನವೀಕರಿಸಿಕೊಂಡು ಜಮೀನುಗಳ ಹಕ್ಕು ಮತ್ತು ಗಡಿ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ಈಗಾಗಲೇ ಹದಿನಾಲ್ಕು ಗ್ರಾಮಗಳಲ್ಲಿ ಪೋಡಿ ಮುಕ್ತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು ೩೦೦೦ ಏಕ ಮಾಲೀಕತ್ವದ ಫಹಣಿಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ ಎಂದರು.
ಭೂಮಿ ಇಲಾಖೆಯ ಹಿರಿಯ ಅಧಿಕಾರಿ ಸಮರ್ಥರಾವ್ ಮಾತನಾಡಿ ಒಂದು ಹಿಸ್ಸೆಗೆ, ಒಂದು ಆರ್ಟಿಸಿ, ಒಂದು ನಕ್ಷೆ, ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು, ಆರ್.ಟಿ.ಸಿ ಮತ್ತು ಭೂದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು, ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದ್ದು ಎಲ್ಲ ರೈತರು ಸಹಕರಿಸುವಂತೆ ಕೋರಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ಮುನಿಯಪ್ಪ, ತನುಜಾ ರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ತಹಸೀಲ್ದಾರ್ ಕೆ.ಎಂ.ಮನೋರಮಾ, ಎಡಿಎಲ್ಆರ್ ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಮೋಹನ್, ಗ್ರಾಮ ಪಂಚಾಯತಿ ಪಿಡಿಓ ವಲೀಬಾಷ ಮತ್ತಿತರರು ಹಾಜರಿದ್ದರು.