ಸಾಗುವಳಿ ಮಾಡದೇ ಕೃಷಿ ಕಾಯಕ ಕೈಗೊಳ್ಳುವುದು. ರಸಗೊಬ್ಬರಗಳ ಬಳಕೆ ಮಾಡದಿರುವುದು. ಕಳೆ ತೆಗೆಯದಿರುವುದು ಹಾಗೂ ಕೀಟನಾಶಕ ಸಿಂಪಡಿಸದೇ ಇರುವುದು ಸಹಜ ಕೃಷಿಯ ಮೂಲ ಪಾಠ ಎಂದು ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಈಚೆಗೆ ಮಧುಗಿರಿ ತಾಲ್ಲೂಕಿನಿಂದ ಆಗಮಿಸಿದ್ದ ೫೫ ಮಂದಿ ರೈತರು ಹಾಗೂ ರೈತ ಮಹಿಳೆಯರಿಗೆ ತಾವು ಕೈಗೊಂಡಿರುವ ಸಾಯವಯ ಹಾಗೂ ಸಹಜ ಕೃಷಿಯ ಬಗ್ಗೆ ತಮ್ಮ ತೋಟದಲ್ಲಿ ವಿವರಿಸಿ ಅವರು ಮಾತನಾಡಿದರು.
ಜೇನುಸಾಕಣೆ, ಸೀಮೆಹಸುಗಳು, ಕುರಿಗಳು, ಕೋಳಿಗಳನ್ನೂ ಸಾಕುತ್ತಾ ಕೃಷಿ ತ್ಯಾಜ್ಯಗಳಿಂದ ಗೋಬರ್ ಗ್ಯಾಸ್ ಅನಿಲ, ರಸಸಾರ ತೊಟ್ಟಿ ಹಾಗೂ ಕಾಂಪೋಸ್ಟ್ಗಳನ್ನು ರೂಪಿಸಿಕೊಂಡಲ್ಲಿ ಮಾತ್ರ ಸಮಗ್ರ ಕೃಷಿ ಸಾಧ್ಯ. ಇದರಿಂದ ರೈತರ ಆರ್ಥಿಕ ಮೂಲಗಳು ಹೆಚ್ಚಾಗುತ್ತವೆ. ರೈತರ ಉತ್ಪನ್ನಗಳು ವಿಷರಹಿತವಾಗಿರಬೇಕು. ಅದಕ್ಕಾಗಿ ಆದಷ್ಟೂ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಎಂದರು.
ಕೃಷಿಯ ಅಂತಿಮ ಉದ್ದೇಶ ಬೆಳೆ ಬೆಳೆಯುವುದಲ್ಲ. ಬದಲಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ಹಾಕುವುದು ಎಂದು ಹೇಳಿದ ಫುಕುವೊಕ ಅವರ ಮಾತುಗಳು ಎಲ್ಲ ರೈತರಿಗೂ ಪ್ರೇರಣೆಯಾಗಬೇಕು. ಪ್ರಕೃತಿಯ ಭಾಗವಾದ ಕಲ್ಲು, ಮಣ್ಣು, ನೀರು ಗಾಳಿ, ಅಗ್ನಿ, ಆಕಾಶ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯಾ, ಎರೆಹುಳು ಎಲ್ಲವೂ ಅವಯವಗಳೇ ಆಗಿವೆ. ಈ ಅವಯವಗಳನ್ನು ಬಳಸುವ ಹಾಗೂ ಹೆಚ್ಚಿಸುವ ಕೃಷಿ ವಿಧಾನವೇ ಸಾವಯವ ಎಂದು ಅವರು ತಿಳಿಸಿದರು.
ಅರಿಶಿನ, ಈರುಳ್ಳಿ, ಬೆಳ್ಳುಳ್ಳಿ, ಧನಿಯಾ, ಅರಿವೆ ಸೊಪ್ಪು, ದಂಟಿನಸೊಪ್ಪು, ಕೊತ್ತಂಬರಿಸೊಪ್ಪು, ಪಾಲಕ್, ಸಬಾಕ್ಷಿಸೊಪ್ಪು, ಕರಿಬೇವು, ರಾಗಿ, ಮುಸುಕಿನ ಜೋಳ, ಸಾಸಿವೆ, ಅವರೆ, ಬದನೇಕಾಯಿ, ಬೆಂಡೇಕಾಯಿ, ನಿಂಬೆಹಣ್ಣು, ಹುಣಸೆಹಣ್ಣು, ಅರಳು, ಹೊಂಗೆಬೀಜ, ಬೇವು, ಮೆಣಸಿನಕಾಯಿ, ನುಗ್ಗೇಕಾಯಿ, ಸಪೋಟಾ, ತೆಂಗು, ಮಾವು, ಗೋಡಂಬಿ, ಸಿಹಿಗುಂಬಳ, ಸೋರೇಕಾಯಿ, ಜೇನು, ಹಿಪ್ಪುನೇರಳೆ, ಹಾಲು, ಹಲಸು, ಗೆಣಸು, ಚಪ್ಪರದವರೆ, ಕಾಕಿಜೋಳ, ಪುದೀನ, ಶುಂಠಿ, ಅಂಟವಾಳ, ವೆಲ್ವೆಟ್ ಬೀನ್ಸ್, ಅಗಸೆ ಮುಂತಾದ ಬೆಳೆಗಳನ್ನು ಅವರು ರಾಸಾಯನಿಕಗೊಬ್ಬರ ಬಳಸದೇ ಬೆಳೆದಿರುವ ಬಗ್ಗೆ ವಿವರಿಸಿದರು.
ತಾಲ್ಲೂಕಿನ ಕೃಷಿ ಅಧಿಕಾರಿ ಜನಾರ್ಧನ ಉಪಸ್ಥಿತರಿದ್ದರು