ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಪ್ರಚಾರ ಭರಾಟೆ ತಾಲ್ಲೂಕಿನಲ್ಲಿ ಪ್ರಾರಂಭವಾಗಿದೆ.
ನಾಮಪತ್ರಗಳ ಪರಿಶಿಲನೆ ಕಾರ್ಯ ಮುಗಿದಿದ್ದು, ನಾಮಪತ್ರವನ್ನು ಹಿಂಪಡೆಯುವ ದಿನ ಫೆಬ್ರುವರಿ 4 ರ ಗುರುವಾರವಿದೆ. ಪಕ್ಷೇತರರಿಗೆ ಚಿಹ್ನೆಗಳು ನಂತರ ನೀಡಲಾಗುತ್ತದೆ. ಆದರೂ ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಕೆಲವು ಅಭ್ಯರ್ಥಿಗಳು ದೇವಸ್ಥಾನಗಳಲ್ಲಿ ಪೂಜೆಯಲ್ಲಿ ಪಾಲ್ಗೊಂಡು ಪ್ರಚಾರ ಕಾರ್ಯ ಪ್ರಾರಂಬಿಸಿದ್ದಾರೆ.
ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಜೊತೆಯಾಗಿ ಬೆಂಬಲಿಗರೊಂದಿಗೆ ಮನೆಮನೆ ಬೇಟಿ ನೀಡುತ್ತಾ ಕರಪತ್ರಗಳನ್ನು ನೀಡುತ್ತಾ ಮತಯಾಚಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ನಾಮಪತ್ರ ಸಲ್ಲಿಸಿದ ದಿನದಿಂದಲೇ ತಮ್ಮ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್, ‘ನಿಮ್ಮ ಅಮೂಲ್ಯ ಮತ ಒಂದು ಉತ್ಕೃಷ್ಟ ಭವಿಷ್ಯವನ್ನು ನಿರ್ಮಿಸಬಹುದು’ ಎಂದು ಕರಪತ್ರವನ್ನು ವಿತರಿಸುತ್ತಾ ಮತಯಾಚಿಸುತ್ತಿದ್ದಾರೆ.
ತಾಲ್ಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವವರಲ್ಲಿ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದವರು. ಮೊದಲು ಚೀಮಂಗಲ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಅವರು ಈ ಬಾರಿಯೂ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಿಲ್ಲಾ ಪಂಚಾಯತಿ ಹಾಲಿ ಸದಸ್ಯ ಸತೀಶ್ ಈ ಮೊದಲು ಜಂಗಮಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಬಾರಿ ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯ ಸಿ.ವಿ.ಲೋಕೇಶ್ಗೌಡ ವಿಧಾನ ಸಭೆ ಚುನಾವಣೆಗೆ ತಾವೊಮ್ಮೆ ಸ್ಪರ್ಧಿಸಿದ್ದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷರಾದಲ್ಲಿ ಸಂಪುಟ ಸ್ಥಾನಮಾನ ಸಿಗುವ ಸೌಲಭ್ಯ ಸಿಗುವುದರಿಂದ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಪೈಪೋಟಿ ನಡೆದಿದೆ.
ತಮ್ಮ ಪಕ್ಷಗಳ ಮುಖಂಡರ ಭಾವಚಿತ್ರಗಳಿರುವ ಹಾಗೂ ಸಾಧನೆಗಳ ವಿವರಗಳುಳ್ಳ ಕರಪತ್ರಗಳನ್ನು ಹಂಚುತ್ತಾ ಭರವಸೆಗಳನ್ನು ನೀಡುತ್ತಾ, ಹಿರಿಯರ ಕಾಲಿಗೆ ನಮಸ್ಕರಿಸುತ್ತಾ ಅಭ್ಯರ್ಥಿಗಳು ಮತಯಾಚಿಸುತ್ತಿದ್ದಾರೆ.