ನಗರದ ರೈಲ್ವೆ ನಿಲ್ದಾಣದ ಸಮೀಪ ಅಹಲೆ ಸುನ್ನತ್ ಉಲ್ ಜಮಾತ್ ಜಾಮಿಯಾ ಮಸೀದಿ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಪ್ರವಾದಿ ಮಹಮ್ಮದ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಮಿಯಾ ಮಸೀದಿ ಮುಖ್ಯ ಗುರು ಹಾಫಿಜ್ ಖಾರಿ ನಜರ್ ಸಲಾಮಿ ಸಾಹಬ್ ಮಾತನಾಡಿದರು.
“ಮಝಬ್ ಸಿಖಾತಾ ನಹೀ ಆಪಸ್ ಮೆ ಬೈರ್ ರಖನಾ” ಅಂದರೆ ಧರ್ಮವು ದ್ವೇಷವನ್ನು ಕಲಿಸುವುದಿಲ್ಲ, ಪರಸ್ಪರ ಸೌಹಾರ್ಧದಿಂದ ಇರಬೇಕು ಎಂಬ ಕವಿ ಇಕ್ಭಾಲರ ಮಾತನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಸಲ್ಮಾನರು ಪರಸ್ಪರ ಎದುರಾದಾಗ “ಅಸ್ ಸಲಾಂ ಅಲೈಕುಂ” ಮತ್ತು “ವಾಲೈ ಕುಂ ಸಲಾಂ” ಎನ್ನುತ್ತಾರೆ. ಇದರ ಅರ್ಥ “ನಿಮಗೆ ಅಲ್ಲಾಹುವಿನ ಶಾಂತಿಯಾಗಲಿ” ಎಂದಾಗಿದೆ. ಮುಸ್ಲಿಮರು ಪ್ರತಿ ಬಾರಿ ವಂದಿಸುವಾಗ ದೇವರನ್ನು ನೆನೆಯುವುದು ವಾಡಿಕೆ. ಇದರ ಹಿಂದಿನ ಉದ್ದೇಶ ಎಲ್ಲರೂ ದೇವರ ಮಕ್ಕಳೇ, ನಮ್ಮಲ್ಲಿ ಬೇಧ ಭಾವಗಳಿಲ್ಲ ಎಂಬುದಾಗಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ಜಗತ್ತಿನ ಎಲ್ಲಾ ಧರ್ಮಗಳು ಬೋಧಿಸುವುದು ಪ್ರೀತಿಯನ್ನು. ಸಮಾಜಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳಬೇಕಾದ ಅಗತ್ಯ ನಮಗೆಲ್ಲರಿಗೂ ಇದೆ. ನಾವು ಯಾವುದೇ ಜಾತಿ-ಧರ್ಮಕ್ಕೆ ಸೇರಿದ್ದರೂ ಕೂಡ ನಾವು ಮನುಷ್ಯರೆನ್ನುವುದನ್ನು ಮರೆಯಬಾರದು. ಮಾನವತ್ವವೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ ಎನ್ನುವುದನ್ನು ಮರೆಯಬಾರದು. ಸಾಧ್ಯವಾದರೆ ಇತರರಿಗೆ ಸಹಾಯ ಮಾಡಬೇಕು, ಸುಮ್ಮನಿದ್ದರೂ ಪರವಾಗಿಲ್ಲ, ಯಾರಿಗೂ ತೊಂದರೆ ಕೊಡಬಾರದು ಎಂದು ಹೇಳಿದರು.
ಜಮಾತೆ ಇಸ್ಲಾಮಿ ಹಿಂದ್ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಸಾಹಬ್ ಮಾತನಾಡಿ, ಭಗವಂತನಿಗೆ ಶರಣಾಗುವುದೇ ಇಸ್ಲಾಂನ ಮೂಲ ಸಿದ್ಧಾಂತ. ಪ್ರವಾದಿ ಮಹಮ್ಮದ್ ಅವರ ಫೋಟೋ ಆಗಲೀ ಮೂರ್ತಿಯಾಗಲೀ ಎಲ್ಲೂ ಇಲ್ಲ. ಅವರು ಬದುಕಿನ ಮಾರ್ಗವನ್ನು ಕಲಿಸಿದರೇ ಹೊರತು ತಮ್ಮನ್ನು ಆರಾಧಿಸಲು ತಿಳಿಸಿಲ್ಲ. ಮನುಷ್ಯರನ್ನು ಪರಸ್ಪರ ಒಂದುಗೂಡಿಸುವುದೇ ಅವರ ಜೀವನ ಧ್ಯೇಯವಾಗಿತ್ತು. ಜನರು ತಾವು ಮಾಡುತ್ತಿರುವ ಎಲ್ಲಾ ಕೆಲಸಗಳಿಗೂ ತಾವೇ ಹೊಣೆಗಾರು ಮತ್ತು ಮರಣದ ಬಳಿಕ ಆ ಎಲ್ಲಾ ಕೃತ್ಯಗಳಿಗೆ ಲೆಕ್ಕಾಚಾರವನ್ನು ನೀಡಬೇಕೆಂದು ಅವರು ಜನರಲ್ಲಿ ಪ್ರಜ್ಞೆಯನ್ನು ಮೂಡಿಸಿದರು. ಮಾದಕ ವಸ್ತುಗಳು, ಮಧ್ಯಪಾನ, ವೇಶ್ಯಾವಾಟಿಕೆಗಳನ್ನು ನಿಷೇಧಿಸುವುದರೊಂದಿಗೆ ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸಿದರು. ಪ್ರವಾದಿ ಮುಹಮ್ಮದರು ಸಂಸಾರಿಕ ಹಿಂಸೆಗಳನ್ನು ಖಂಡಿಸಿ ಮಹಿಳೆಯರಿಗೆ ತಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸಿದರು. ಅವರು ಪ್ರಾಣಿಗಳ, ಗಿಡಮರಗಳ ಮತ್ತು ಪರಿಸರದ ರಕ್ಷಣೆಯ ಕಾನೂನುಗಳನ್ನು ಸ್ಥಾಪಿಸಿದರು ಎಂದು ವಿವರಿಸಿದರು.
ದೊಡ್ಡಬಳ್ಳಾಪುರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮಹಾಲಿಂಗಯ್ಯ ಮಾತನಾಡಿ, ಸರ್ವ ಧರ್ಮೀಯರನ್ನು ಆಹ್ವಾನಿಸಿ ಆಚರಿಸುತ್ತಿರುವ ಪ್ರವಾದಿ ಮಹಮ್ಮದ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾದುದು. ಶಾಂತಿ, ಸೌಹಾರ್ಧ ಹಾಗೂ ನೆಮ್ಮದಿಯ ಬದುಕಿಗಾಗಿ ಈ ರೀತಿಯ ಕಾರ್ಯಕ್ರಮಗಳು ನಡೆಯಬೇಕು. ಮಾನಸಿಕವಾಗಿ, ನೈತಿಕವಾಗಿ, ಆರ್ಥಿಕವಾಗಿ ಹಾಗೂ ಧಾರ್ಮಿಕವಾಗಿ ನಾವುಗಳು ವಿಶಾಲ ಮನೋಭಾವದಿಂದ ಪರಿವರ್ತಿತರಾದಾಗ ಮಾತ್ರ ಸ್ವರ್ಗ ಸಮಾನವಾದ ಸಮಾಜವನ್ನು ಕಾಣಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಜಿಲ್ಲಾ ವಕ್ಫ್ ಮಂದಳಿ ಅಧ್ಯಕ್ಷ ಬಿ.ಎಸ್.ರಫಿಯುಲ್ಲಾ, ಸಮತಾ ಸೈನಿಕ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀರಾಮಣ್ಣ, ಸುಬ್ರಮಣಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ಜಾಮಿಯಾ ಮಸೀದಿ ಸದಸ್ಯ ತಾಜ್ ಪಾಷ, ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಗೌರವಾಧ್ಯಕ್ಷ ಮೊಹಮದ್ ಖಾಸಿಂ, ಅಧ್ಯಕ್ಷ ಮೊಹಮ್ಮದ್ ಅಸದ್, ಕಾರ್ಯದರ್ಶಿ ಇಮ್ತಿಯಾಜ್ ಪಾಷ ಹಾಜರಿದ್ದರು.