ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ೨೦೧೪-–೧೫ ನೇ ಸಾಲಿನಿಂದ ೨೦೧೭–-೧೮ ನೇ ಸಾಲಿನವರೆಗಿನ ತಾಲ್ಲೂಕು ಪಂಚಾಯಿತಿ ವಿವಿಧ ಯೋಜನೆಗಳಲ್ಲಿ ಶೇ ೩ ರ ಅನುದಾನದಡಿಯಲ್ಲಿ ಒಟ್ಟು ೨೦.೨೫ ಲಕ್ಷ ಅನುದಾನದ ಹಣವನ್ನು ಸುಮಾರು ೨೯೨ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಅಂಗವಿಕಲರು ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳಲ್ಲಿ ಶೇ ೩ ರ ಅನುದಾನವನ್ನು ಪ್ರತ್ಯೇಕಿಸಿ ಅಂಗವಿಕಲರಿಗೆ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಸವಲತ್ತುಗಳ ಕುರಿತು ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಒಂದೇ ಹಂತದಲ್ಲಿ ಎಲ್ಲರಿಗೂ ವಿತರಣೆ ಮಾಡಲಿಕ್ಕೆ ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ವೆಂಕಟೇಶ್ ಮಾತನಾಡಿ, ೨೦೧೪-–೧೫ ಸಾಲಿನಿಂದ ೨೦೧೭-–೧೮ ನೇ ಸಾಲಿನವರೆಗೂ ಶೇ ೩ ರ ಅನುದಾನದಲ್ಲಿ ಸುಮಾರು ೨೦ ಲಕ್ಷ ೨೫ ಸಾವಿರ ಹಣದ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಲ್ಲಿ ಶಿಕ್ಷಣವಲಯಕ್ಕಾಗಿ ಶೇ ೩೦ ರಷ್ಟು, ಸಾಮಾಜಿಕ ವಲಯಕ್ಕೆ ಶೇ ೨೦ ರಷ್ಟು, ಜೀವನಾಧಾರ ಶೇ ೨೦ ರಷ್ಟು, ವೈದ್ಯಕೀಯ ಪುನರ್ವಸತಿಗಾಗಿ ಶೇ ೨೦ ರಷ್ಟು ಹಣವನ್ನು ವರ್ಗೀಕರಿಸುವ ಮೂಲಕ ಅನುದಾನಗಳನ್ನು ವಿನಿಯೋಗ ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ಬರುವ ಅನುದಾನಗಳಲ್ಲಿ ಶೇ ೩ ರಷ್ಟು ಹಣವನ್ನು ಅಂಗವಿಕಲರಿಗಾಗಿ ಮೀಸಲಿಡಬೇಕು ಎಂಬ ನಿಯಮವಿದ್ದರೂ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ಹಣವನ್ನು ಮೀಸಲಿರಿಸದೇ ರಸ್ತೆ, ಬೀದಿ ದ್ವೀಪ ಕಾಮಗಾರಿಗಳಿಗೆ ಅಳವಡಿಸುವುದು ರೂಢಿಯಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಿ ಅಂಗವಿಕಲರಿಗಾಗಿ ಮೀಸಲಿರುವ ಹಣವನ್ನು ಅವರ ಕಲ್ಯಾಣಕ್ಕೆ ಉಪಯೋಗಿಸಲು ಮುಂದಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಲಕ್ಷ್ಮೀನಾರಾಯಣರೆಡ್ಡಿ, ಎಚ್.ನರಸಿಂಹಯ್ಯ, ಶ್ರೀನಿವಾಸ್, ಚಂದ್ರಕಲಾ, ಶೋಭಾ, ಶಂಕರಮ್ಮ, ದೀಪಾ, ನಾಗವೇಣಿ, ನಾಗರಾಜ್, ನರಸಿಂಹಪ್ಪ, ರಾಜಶೇಖರ್, ನರೇಗಾ ಸಹಾಯಕ ನಿರ್ದೇಶಕ ಸಿ.ಎಸ್.ಶ್ರೀನಾಥ್ಗೌಡ, ಮುಖಂಡರಾದ ಮಾರಪ್ಪ, ರಾಂಬಾಬು ಹಾಜರಿದ್ದರು.