Home News ಬಡ್ಡಿ ಮಾಫಿಯಾದಿಂದ ಬಡವರನ್ನು ದೂರವಿರಿಸಲು ಬಡ್ಡಿ ರಹಿತ ಸಾಲ

ಬಡ್ಡಿ ಮಾಫಿಯಾದಿಂದ ಬಡವರನ್ನು ದೂರವಿರಿಸಲು ಬಡ್ಡಿ ರಹಿತ ಸಾಲ

0

ಬಡ್ಡಿ ಮಾಫಿಯಾದಿಂದ ಬಡಕುಟುಂಬಗಳನ್ನು ಬಿಡಿಸಲೆಂದು ಡಿಸಿಸಿ ಬ್ಯಾಂಕ್ ಬಡ್ಡಿ ರಹಿತ ಸಾಲವನ್ನು ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿದೆ. ಇದು ಸಾಲವಲ್ಲ ತಾಯಂದಿರಿಗೆ ಮಡಿಲು ತುಂಬುವ ಕಾರ್ಯಕ್ರಮ. ಪಡೆದ ಹಣವನ್ನು ಪ್ರಾಮಾಣಿಕವಾಗಿ ನಮ್ಮ ಹೆಣ್ಣುಮಕ್ಕಳು ಕಟ್ಟುತ್ತಾರೆ ಎಂಬ ದೃಢ ನಂಬಿಕೆ ನಮ್ಮದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಬಳಿಯಿರುವ ಶ್ರೀ ಸಾಯಿಬಾಬ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸುಮಾರು 31 ಸ್ವಸಹಾಯ ಸಂಘಗಳಿಗೆ 1 ಕೋಟಿ 25 ಲಕ್ಷ 72 ಸಾವಿರ ರೂಗಳನ್ನು ಬಡ್ಡಿ ರಹಿತವಾಗಿ ಸಾಲ ವಿತರಿಸಿ ಅವರು ಮಾತನಾಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯ ಪಡೆದರೆ, ಪಡೆದ ಸಾಲಕ್ಕೆ ಬಡ್ಡಿಯನ್ನು ಕಟ್ಟಬೇಕು, ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ. ಹಾಗಾಗಿ ತಾವು ಪಡೆಯುವ ಸಾಲದ ಹಣವನ್ನು ನಿಗಧಿತ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಸಾಲದ ಮರುಪಾವತಿ ಸುಲಭವಾಗುತ್ತದೆ ಎಂದರು.
ತಾಲ್ಲೂಕಿನಾಧ್ಯಂತ ಇರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆಗೆಯುವ ಬದಲಿಗೆ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್ ನಲ್ಲಿ ವೈಯಕ್ತಿಕ ಖಾತೆ ತೆರೆಯುವ ಮೂಲಕ ವ್ಯವಹರಿಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಣ್ಣುಮಕ್ಕಳಿಗೆ ಸಾಲ ವಿತರಿಸಲು ಸಾಧ್ಯವಾಗುತ್ತದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಿಗೆ ಒದಗಿಸುತ್ತಿರುವ ಬಡ್ಡಿರಹಿತ ಸಾಲವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 31 ಮಹಿಳಾ ಸ್ವಸಹಾಯ ಸಂಘಗಳಿಗೆ 1 ಕೋಟಿ 25 ಲಕ್ಷ 72 ಸಾವಿರ ರೂಗಳ ಸಾಲ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ರಾಮಿರೆಡ್ಡಿ, ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮಾಜಿ ಹಾಪ್ ಕಾಮ್ಸ್ ಅಧ್ಯಕ್ಷ ಬಿ.ವಿ.ಮುನೇಗೌಡ, ಬಿ.ಎಂ.ವೆಂಕಟರೆಡ್ಡಿ, ಎಂ.ಆರ್.ಮುನಿಕೃಷ್ಣಪ್ಪ, ವೆಂಕಟಮೂರ್ತಿ, ಎಂ.ಎನ್.ನಾಗರಾಜ್, ಮಳ್ಳೂರು ಎಸ್ ಎಫ್ ಸಿ ಎಸ್ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಚಿದಾನಂದ, ಸಂಜೀವಮ್ಮ ಹಾಜರಿದ್ದರು.

error: Content is protected !!