Home News ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿ – ಜೆ.ವೆಂಕಟಾಪುರ

ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿ – ಜೆ.ವೆಂಕಟಾಪುರ

0

ತಾಲ್ಲೂಕಿನ ಜೆ,ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಲ್ಲಿಯೂ ಶೇ. ೧೦೦ ರಷ್ಟು ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದರಿಂದ ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿಯನ್ನು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗಿದೆ ಎಂದು ಸ್ವಚ್ಚ ಭಾರತ್ ಮಿಷನ್‌ನ ಜಿಲ್ಲಾ ಸಂಯೋಜಕ ಭಾಸ್ಕರ್ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸ್ವಚ್ಚಭಾರತ್ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸುವ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಯಲು ಶೌಚದಿಂದ ಅನಾರೋಗ್ಯದ ಸಮಸ್ಯೆ ಸೇರಿದಂತೆ ಹೆಣ್ಣು ಮಕ್ಕಳ ಗೌರವಕ್ಕೆ ಕುಂದು ಬರಬಾರದು ಎಂಬ ಉದ್ದೇಶದಿಂದ ಸರ್ಕಾರ ಸ್ವಚ್ಚ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಪ್ರತಿಯೊಬ್ಬರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವರಿಗೆ ಮನವರಿಕೆ ಮಾಡಿಕೊಟ್ಟು ಇಡೀ ಗ್ರಾಮ ಪಂಚಾಯ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಶೇ. ೧೦೦ ರಷ್ಟು ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲು ಸಹಕರಿಸಿದ ಗ್ರಾಮ ಪಂಚಾಯ್ತಿಯ ಎಲ್ಲಾ ಜನಪ್ರತಿನಿಧಿಗಳು ಹಾಗು ಅಧಿಕಾರ ವರ್ಗದವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮಾತನಾಡಿ ಜಿಲ್ಲೆಯಲ್ಲಿಯೇ ಪ್ರಥಮ ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿಯಾಗಿ ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿ ಘೋಷಣೆಯಾಗಿರುವುದು ಸಂತಸದ ವಿಷಯ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮ ಪಂಚಾಯ್ತಿ ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿಯಾಗಿ ಘೋಷಣೆಯಾಗಿರುವುದು ಸಂತೋಷದ ವಿಷಯ ಹಾಗು ಇದಕ್ಕಾಗಿ ಶ್ರಮಿಸಿದ ಸರ್ವಸದಸ್ಯರೂ, ಅಧಿಕಾರಿಗಳು ಹಾಗು ನಾಗರೀಕರಿಗೆ ಧನ್ಯವಾದಗಳು ಎಂದರು.
ಸಭೆಯಲ್ಲಿ ಈಗಾಗಲೇ ನಿವೇಶನ ಹೊಂದಿರುವ ವಸತಿರಹಿತ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ೨೦೧೭-೧೮ ನೇ ಸಾಲಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಂದ್ರೇಗೌಡ, ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಪ್ರಸಾದ್, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಂಜನ್‌ಕುಮಾರ್, ಸದಸ್ಯರು ಹಾಜರಿದ್ದರು.

error: Content is protected !!