Home News ಬರ ಅಧ್ಯಯನ ತಂಡದ ವಿರುದ್ಧ ಪ್ರತಿಭಟನೆ

ಬರ ಅಧ್ಯಯನ ತಂಡದ ವಿರುದ್ಧ ಪ್ರತಿಭಟನೆ

0

ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮಕ್ಕೆ ಭೇಟಿ ನೀಡದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್ ನೇತೃತ್ವದ ಬರ ಅಧ್ಯಯನ ತಂಡ ಹೊರಟುಹೋಗಿದ್ದನ್ನು ಖಂಡಿಸಿ ರೈತಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಖಾಲಿ ಕೊಡಗಳನ್ನಿಟ್ಟು ರಸ್ತೆ ತಡೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ದೊಡ್ಡದಾಸರಹಳ್ಳಿ ಹಾಗೂ ನಾರಾಯಣದಾಸರಹಳ್ಳಿ ಗ್ರಾಮಗಳಲ್ಲಿ ಬರ ಅಧ್ಯಯನ ತಂಡ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು, ಮಧ್ಯಾಹ್ನ ೧೨ ಗಂಟೆಗೆ ತಾಲ್ಲೂಕಿಗೆ ಆಗಮಿಸಬೇಕಾಗಿದ್ದ ತಂಡಕ್ಕಾಗಿ ರೈತ ಮುಖಂಡರು, ನೂರಾರು ಸಂಖ್ಯೆಯಲ್ಲಿ ನಾಗರಿಕರು ಕಾದಿದ್ದರು. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಮೇವುಗಳ ಸಮಸ್ಯೆ, ಹೇಳಿಕೊಳ್ಳಲು ಕಾಯುತ್ತಿದ್ದರೂ, ಸುಮಾರು ೨ ಗಂಟೆಗೆ ಬಂದ ತಂಡ, ನೇರವಾಗಿ ದೊಡ್ಡದಾಸರಹಳ್ಳಿಗೆ ತೆರಳಿ ಅಲ್ಲಿನ ಜನರಿಂದ ಸಮಸ್ಯೆ ಆಲಿಸಿ, ಅಲ್ಲಿಂದ ನೇರವಾಗಿ ಚಿಂತಾಮಣಿಯ ಕಡೆಗೆ ತೆರಳಿದ್ದರಿಂದ ನೂರಾರು ಮಂದಿ ಜನರು, ರೈತ ಮುಖಂಡರು ನಿರಾಸೆಯಿಂದ ಬೇಸತ್ತು ಪ್ರತಿಭಟನೆ ನಡೆಸಿದರು.
‘ಹೆಂಗಸರು, ಕೂಲಿ ಕಾರ್ಮಿಕರು, ಸುತ್ತಮುತ್ತಲ ಗ್ರಾಮಸ್ಥರು ಹಲವಾರು ಮಂದಿ ಕೂಲಿಗೂ ಹೋಗದೇ, ತಮ್ಮ ಕಾಯಕವನ್ನು ಬಿಟ್ಟು ಜನಪ್ರತಿನಿಧಿಗಳು ದೇವಮಾನವರಂತೆ ಬಂದು ತಮ್ಮ ಸಮಸ್ಯೆಗಳನ್ನು ನಿವಾರಿಸುವರೆಂದು ಕಾದಿದ್ದರು. ನಾರಾಯಣದಾಸರಹಳ್ಳಿಯಲ್ಲಿ ಕುಡಿಯಲು ನೀರಿಲ್ಲ. ಖಾಸಗಿ ಕೊಳವೆ ಬಾವಿಯಿಂದ ಕೊಡುವ ನೀರಷ್ಟೆ ಗ್ರಾಮಸ್ಥರಿಗೆ ಆಧಾರ. ದೊಡ್ಡದಾಸರಹಳ್ಳಿಗೆ ಬಂದು ನೀರು ಚಿಮ್ಮುತ್ತಿರುವ ಕೊಳವೆ ಬಾವಿಯ ನೀರನ್ನು ಕುಡಿದು ಹಿಂದಿರುಗಿದ್ದಾರೆ. ಅಲ್ಲಿಂದ ಕೂಗಳತೆ ದೂರದಲ್ಲಿರುವ ನಾರಾಯಣದಾಸರಹಳ್ಳಿಗೆ ಬಂದಿಲ್ಲ. ಇವರ ಕಾಟಾಚಾರದ ಅಧ್ಯಯನಕ್ಕಾಗಿ ಜನರ ಸಮಯ ಮತ್ತು ಹಣವನ್ನು ಪೋಲು ಮಾಡಿದ್ದಾರೆ. ಈ ರೀತಿಯ ಕಾಟಾಚಾರದ ಬರವೀಕ್ಷಣೆಯ ಬದಲು ಜಿಲ್ಲಾಡಳಿತದಿಂದ ವರದಿ ತರಿಸಿಕೊಳ್ಳಬಹುದಿತ್ತಲ್ಲವೆ’ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದ ಪೊಲೀಸರು ಅವರ ಮನವಿ ಪತ್ರವನ್ನು ನೀಡುವಂತೆ ಮನವೊಲಿಸಿ ಅವರಿಂದ ಮನವಿ ಸ್ವೀಕರಿಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ, ಅಶ್ವತ್ಥ್, ಬೈರಸಂದ್ರ ಶ್ರೀಮೂರ್ತಿ, ಆನೂರು ದೇವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!