ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ಮೆಚ್ಚಿದ ಜನರು ಗುಜರಾತ್ ಹಾಗು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಆಶೀರ್ವದಿಸಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ಗುಜರಾತ್ ಹಾಗು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಂತಸದಲ್ಲಿ ನಗರದ ಕೋಟೆ ವೃತ್ತ ಮತ್ತು ಬಸ್ ನಿಲ್ದಾಣದ ಬಳಿ ಸೋಮವಾರ ಬಿಜೆಪಿ ತಾಲ್ಲೂಕು ಘಟಕದ ಸದಸ್ಯರೊಂದಿಗೆ ಪಟಾಕಿ ಸಿಡಿಸಿ, ಸಿಹಿಹಂಚಿ ಅವರು ಮಾತನಾಡಿದರು.
ದೇಶವನ್ನು ಅಭಿವೃದ್ಧಿ ಪತದಲ್ಲಿ ಮುನ್ನಡೆಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಚಲಾವಣೆ ತಡೆಗೆ ನೋಟು ಅಮಾನ್ಯೀಕರಣ ಸೇರಿದಂತೆ ಹಲವಾರು ಒಳ್ಳೊಳ್ಳೆ ಯೋಜನೆಗಳೊಂದಿಗೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ.
ನಗದು ರಹಿತ ಸಮಾಜ ನಿರ್ಮಾಣ ಮಾಡುವುದು ನಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ವಿಶ್ವವೇ ಮೆಚ್ಚುಗೆ ಸೂಚಿಸಿದೆ. ದೇಶದಲ್ಲಿ ಈ ಹಿಂದೆ ನಡೆದ ಭ್ರಷ್ಟತೆಯ ವಿರುದ್ಧ ರೋಸಿ ಹೋಗಿರುವ ಜನರು ಇದೀಗ ಬಿಜೆಪಿ ಪಕ್ಷದ ಕಡೆ ಹೆಚ್ಚು ಒಲವು ಹೊಂದಿದ್ದಾರೆ ಎಂದರು.
ನಗರದ ಸಲ್ಲಾಪುರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಸುರೇಂದ್ರಗೌಡ, ನಾರ್ತ್ಈಸ್ಟ್ ಸುರೇಶ್, ದಾಮೋದರ್, ಮಂಜುಳಮ್ಮ, ಪುರುಶೋತ್ತಮ್, ಬೈರಾರೆಡ್ಡಿ ಹಾಜರಿದ್ದರು.