Home News ಬೆಳಕಿಗೆ ಬಂದ ಸಿಲ್ಕ್ ವೇಸ್ಟ್(ಜೋಟ್) ಅವ್ಯವಹಾರ

ಬೆಳಕಿಗೆ ಬಂದ ಸಿಲ್ಕ್ ವೇಸ್ಟ್(ಜೋಟ್) ಅವ್ಯವಹಾರ

0

ಹಲವಾರು ವರ್ಷಗಳಿಂದ ಅಡೆತಡೆಯಿಲ್ಲದೆ ನಗರದಲ್ಲಿ ಸಾಗಿದ್ದ ಸಿಲ್ಕ್ ವೇಸ್ಟ್(ಜೋಟ್) ಅವ್ಯವಹಾರ ರೇಷ್ಮೆ ನೂಲು ಬಿಚ್ಚಾಣಿಕೆದಾರರು ನಗರ ಪೊಲೀಸ್ ಠಾಣೆ ಎದುರು ಭಾನುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹೊರಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ನಿವಾಸಿ ಮನ್ಸೂರ್ ಎಂಬುವರನ್ನು ಜೋಟ್ ಉದ್ಯಮಿಗಳು ಥಳಿಸಿ ಜೊಟ್ ಕಸಿದುಕೊಂಡಿದ್ದರು. ಜೋಟ್ ಮುಕ್ತ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ನಗರದ ಪೋಲೀಸ್ ಠಾಣೆಗೆ ಸೋಮವಾರ ಜೋಟ್ ಖರೀದಿದಾರರಾದ ಎಸ್.ಪಿ.ಎಸ್. ಅನ್ಸರ್, ಮೆಹಬೂಬ್, ಶಾಯಿದ್, ಮಧು ಅವರನ್ನು ಕರೆಸಿ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ರೀಲರುಗಳು ಮತ್ತು ಜೋಟ್ ಖರೀದಿದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿ ವಾರ ಶಿಡ್ಲಘಟ್ಟದಲ್ಲಿ ಎರಡೂವರೆ ಟನ್ ಜೋಟ್ ಉತ್ಪಾದನೆಯಾಗುತ್ತದೆ. ಜೋಟ್ ಖರೀದಿದಾರರು ತಮ್ಮದೇ ಕೂಟವನ್ನು ರಚಿಸಿಕೊಂಡು ಒಂದು ಕೆಜಿಗೆ 200 ರೂಗಳಷ್ಟು ವ್ಯತ್ಯಾಸ ಇರುವಂತೆ ಕಡಿಮೆ ಬೆಲೆಗೆ ಖರೀದಿಸುತ್ತಾ ರೀಲರುಗಳಿಗೆ ಲಕ್ಷಾಂತರ ರೂಗಳನ್ನು ವಂಚಿಸುತ್ತಿದ್ದಾರೆ. ಬೇರೆ ಊರಿನಿಂದ ಬರುವ ಜೋಟ್ ಖರೀದಿದಾರರನ್ನು ಬೆದರಿಸಿ ಹೊರದಬ್ಬುವ ಮೂಲಕ ತಮ್ಮದೇ ಆದಿಪತ್ಯವನ್ನು ಸ್ಥಾಪಿಸಿ ವಂಚನೆ ಎಸಗುತ್ತಿದ್ದಾರೆ ಎಂದು ರೀಲರುಗಳು ಈ ಸಂದರ್ಭದಲ್ಲಿ ಆರೋಪಿಸಿದರು.
ಈ ಸಂದರ್ಭದಲ್ಲಿ ಅಕ್ರಮವಾಗಿ ಕೂಟ ರಚಿಸಿಕೊಂಡು, ಸ್ವಯಂಘೋಷಿತ ದರವನ್ನು ನಿಗದಿಗೊಳಿಸಿ ಜೋಟ್ ಖರೀದಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎನ್ನುತ್ತಾ ಠಾಣೆಯ ಮುಂದೆ ಜನರು ಜಮಾಯಿಸಿದಾಗ ಪೊಲೀಸರು ಜನರನ್ನು ಚದುರಿಸಿದರು.
ಮುಕ್ತವಾಗಿ ಯಾರು ಬೇಕಾದರೂ ವ್ಯಾಪಾರ ಮಾಡಬಹುದು. ಯಾರಿಗೂ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಜೋಟ್ ಖರೀದಿದಾರರಿಗೆ ತಾಕೀತು ಮಾಡಿ ಮುಚ್ಚಳಿಕೆ ಬರೆಸಿಕೊಂಡು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಎಚ್ಚರಿಕೆ ನೀಡಿದರು.
ಹಲವಾರು ವರ್ಷಗಳಿಂದ ನಗರದಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಗಳ ಈ ದಂದೆಯ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಒಂದೆಡೆ ರೈತರು ಗೂಡಿಗೆ ಬೆಲೆ ಬರದೆ ಸಂಕಷ್ಟದಲ್ಲಿದ್ದಾರೆ, ಮತ್ತೊಂದೆಡೆ ರೀಲರುಗಳು ರೇಷ್ಮೆಗೆ ಬೆಲೆ ಸಿಗದೆ ನಲುಗುತ್ತಿದ್ದಾರೆ. ಇವೆರಡರ ನಡುವೆ ರೇಷ್ಮೆ ತ್ಯಾಜ್ಯ(ಜೋಟ್) ನಿಂದ ಕೇವಲ ವಾರಕ್ಕೆ ಸುಮಾರು 5 ರಿಂದ 6 ಲಕ್ಷ ರೂಗಳಷ್ಟು ಹಣ ದೋಚುತ್ತಿರುವುದು ಈಗಷ್ಟೆ ಬೆಳಕಿಗೆ ಬಂದಿರುವುದು ರೈತರು ಮತ್ತು ರೀಲರುಗಳಿಗೆ ನುಂಗಲಾಗದ ತುತ್ತಾಗಿದೆ.
ಸಮೀವುಲ್ಲ, ಅಬ್ದುಲ್ ಅಜೀಜ್, ರಹಮಾನ್, ಅನ್ಸರ್, ಮಹಬೂಬ್ ಪಾಷ, ಎಕ್ಬಾಲ್, ಅಕ್ಮಲ್ ಮತ್ತಿತರ ರೀಲರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.