Home News ಬ್ರಿಟೀಷರಿಗೆ ಪರ್ಯಾಯವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ

ಬ್ರಿಟೀಷರಿಗೆ ಪರ್ಯಾಯವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ

0

ಕ್ವಿಟ್ ಇಂಡಿಯಾ ಚಳುವಳಿಯನ್ನು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರನ್ನು ಭಾರತದಿಂದ ತೊಲಗಿಸಲು ಮಾಡಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಜೈಲು ಪಾಲಾಗಿದ್ದರು. ಈಗ ಬಜೆಪಿಯ ವಿರುದ್ಧ ಅದೇ ಮಾದರಿಯ ಜನಪರ ಚಳುವಳಿಯನ್ನು ಕಾಂಗ್ರೆಸ್ ಪಕ್ಷದಿಂದ ರೂಪಿಸಿರುವುದಾಗಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷದ ಆಚರಣೆಯಲ್ಲಿ ಅವರು ಮಾತನಾಡಿದರು.
ಬ್ರಿಟೀಷರಿಗೆ ಪರ್ಯಾಯವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ. ಸ್ವಾತಂತ್ರ್ಯದ ನಂತರ ಸಿಕ್ಕಿದ್ದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಿಜೆಪಿ ಸರ್ಕಾರದ ಪ್ರತಿನಿಧಿಗಳು ಇಲ್ಲಿನ ಸಂಪತ್ತು ಲೂಟಿ ಹೊಡೆಯುವ ಮೂಲಕ ಜೈಲಿಗೆ ಹೋಗುವ ಸಂಸ್ಕೃತಿಯನ್ನು ಬೆಳೆಸಿಕೊಂಡರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮಗಾಂಧಿಜೀ ಅವರ ಹೆಸರೇಳಿಕೊಂಡು, ಅವರನ್ನು ಕೊಲೆ ಮಾಡಿದವರಿಗೆ ಗುಡಿ ಕಟ್ಟುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯೆ ವಿಷದ ಬೀಜಗಳನ್ನು ಬಿತ್ತಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ, ಹಾಗೂ ಜ್ಯಾತ್ಯಾತೀತ ಪಕ್ಷವೆಂದು ಕುಟುಂಬಕ್ಕೆ ರಾಜಕಾರಣ ಸೀಮಿತ ಮಾಡಿಕೊಂಡಿರುವ ಜೆಡಿಎಸ್ ಪಕ್ಷಗಳನ್ನು ಜನರು ತಿರಸ್ಕರಿಸಬೇಕು ಎಂದರು.
ಮಾಜಿ ಸಚಿವ ವಿ.ಮುನಿಯಪ್ಪ ಮಾತನಾಡಿ, ದೇಶದ ಜನರು ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾ, ದೇಶದ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ದುರಾಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಕಿತ್ತೊಗೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರು ಇದುವರೆಗೂ ಶಾಶ್ವತವಾದ ಒಂದೇ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ. ಸ್ವಚ್ಚ ಭಾರತದ ಹೆಸರಿನಲ್ಲಿ ಪ್ರಚಾರಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿಕೊಳ್ಳುತ್ತಿದೆ. ಜನರು ಖಾತೆಗಳಲ್ಲಿ ಜಮಾವಣೆ ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನದಿ ಜೋಡಣೆಯಾಗಲಿಲ್ಲ. ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ, ಜ್ಯಾತ್ಯಾತೀತವೆಂದು ಹೇಳಿಕೊಂಡು ಜಾತಿವಾದ ಮಾಡುತ್ತಿರುವ ಬಿಜೆಪಿ ಈ ರಾಷ್ಟ್ರಕ್ಕೆ ಮಾರಕ ಎಂದರು.
ರೈತರ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿದರೆ ಕೇಂದ್ರ ಉತ್ತರ ಕೊಡಲಿಲ್ಲ, ಸಿದ್ದರಾಮಯ್ಯ 50 ಸಾವಿರದಂತೆ ಮನ್ನಾ ಮಾಡಿದರು. ಬಿಜೆಪಿ ನಾಯಕರಿಗೆ ಬದ್ದತೆಯಿದ್ದರೆ ಕೇಂದ್ರದಿಂದ ಅನುದಾನ ತಂದು ಸಾಲ ಮನ್ನಾ ಮಾಡಿಸಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವೆಂಕಟೇಶ್ವರುಲು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಕಾರ್ಯದರ್ಶಿ ಮಧು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಸುಭ್ರಮಣಿ, ಆರ್. ಶ್ರೀನಿವಾಸ್, ಮೌಲಾ, ಗುಡಿಯಪ್ಪ, ವೆಂಕಟೇಶ್, ನಗರಸಭಾ ಸದಸ್ಯ ಬಾಲಕೃಷ್ಣ, ಚಿಕ್ಕಮುನಿಯಪ್ಪ, ಅಮ್ಜದ್, ರಾಮಚಂದ್ರಪ್ಪ, ಎಚ್.ಎಂ.ಮುನಿಯಪ್ಪ ಹಾಜರಿದ್ದರು.
 

error: Content is protected !!