Home News ಭಕ್ತರಹಳ್ಳಿ ರಾಜ್ಯದಲ್ಲೇ ಪ್ರಥಮ ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮ

ಭಕ್ತರಹಳ್ಳಿ ರಾಜ್ಯದಲ್ಲೇ ಪ್ರಥಮ ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮ

0

ರಾಜ್ಯದಲ್ಲೇ ಪ್ರಥಮವಾಗಿ ತಾಲ್ಲೂಕಿನ ಭಕ್ತರಹಳ್ಳಿಯು ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮವೆಂದು ಸೋಮವಾರ ಘೋಷಿತವಾಗಿದೆ.
ಪ್ರತಿಯೊಂದು ಕುಟುಂಬಕ್ಕೂ ಅಂಚೆ ಜೀವ ವಿಮಾ ಹಾಗೂ ಅಂಚೆ ಕಚೇರಿಯಲ್ಲಿ ಖಾತೆಗಳನ್ನು ಮಾಡಿಸುವ ಮೂಲಕ ಸಂಪೂರ್ಣ ಅಂಚೆ ವಿಮಾ ಹೊಂದಿದ ಗ್ರಾಮವಾಗಿರುವುದಕ್ಕೆ ಅಂಚೆ ಇಲಾಖೆಯ ವತಿಯಿಂದ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣವೊಂದನ್ನು ನಿರ್ಮಿಸಿಕೊಡಲಾಗಿದೆ.
ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಅಂಚೆ ಅಧೀಕ್ಷಕ ಕೆ.ಮುನಿರಾಮಯ್ಯ ಮಾತನಾಡಿ, ‘ರಾಜ್ಯದಲ್ಲೇ ಸಂಪೂರ್ಣ ಗ್ರಾಮೀಣ ಅಂಚೆ ವಿಮಾ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಭಕ್ತರಹಳ್ಳಿ ಪಾತ್ರವಾಗಿದೆ. ಈ ಕಾರ್ಯದಲ್ಲಿ ನಮ್ಮ ಅಂಚೆ ಪೋಸ್ಟ್ ಮಾಸ್ಟರ್ ಮತ್ತು ಗ್ರಾಮಸ್ಥರ ಶ್ರಮವಿದೆ. ಇದರ ಸವಿ ನೆನಪಿಗಾಗಿ ನಮ್ಮ ಅಂಚೆ ಇಲಾಖೆಯಿಂದ ತಂಗುದಾಣವನ್ನು ನಿರ್ಮಿಸಲಾಗಿದೆ. ತಂಗುದಾಣದ ಮೇಲೆ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿಯನ್ನು ಬರೆಸಲಾಗಿದೆ. ಈ ಭಕ್ತರಹಳ್ಳಿ ಗ್ರಾಮ ರಾಜ್ಯದಲ್ಲೇ ಮಾದರಿಯಾಗಿದ್ದು, ಸಂಪೂರ್ಣ ರಾಜ್ಯ ಎಲ್ಲಾ ಗ್ರಾಮಗಳಲ್ಲೂ ಇಲಾಖೆಯ ಯೋಜನೆಗಳು ತಲುಪಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ವಿವರಿಸಿದರು.
ಭಕ್ತರಹಳ್ಳಿ ಪೋಸ್ಟ್ ಮಾಸ್ಟರ್ ಗೋಪಾಲ್ ಮಾತನಾಡಿ,‘ಗ್ರಾಮದಲ್ಲಿ ಸುಮಾರು 600 ಅಂಚೆ ಪಾಲಿಸಿಗಳನ್ನು ಮಾಡಿಸಿದ್ದೇನೆ. ಪ್ರತಿ ತಿಂಗಳೂ ವಿಮಾ ಹಣ ಒಂದು ಲಕ್ಷ ಇಪ್ಪತ್ತು ಸಾವಿರ ರೂಗಳು, ಎಸ್.ಬಿ.ಖಾತೆಗೆ ಒಂದು ಲಕ್ಷ ಎಪ್ಪತ್ತೈದು ಸಾವಿರ ರೂಗಳು, ಆರ್.ಡಿ. ಖಾತೆಗೆ ಎಪ್ಪತ್ತೈದು ಸಾವಿರ ರೂಗಳು ಗ್ರಾಮಸ್ಥರು ಕಟ್ಟುತ್ತಿದ್ದಾರೆ. ಮನೆಮನೆಗೂ ಬೆಳಿಗ್ಗೆ ಮತ್ತು ಸಂಜೆ ನಾನೇ ಖುದ್ದಾಗಿ ಹೋಗಿ ಪೋಸ್ಟ್ ನೀಡುವುದರೊಂದಿಗೆ ಹಣವನ್ನೂ ಕಟ್ಟಿಸಿಕೊಳ್ಳುತ್ತೇನೆ’ ಎಂದು ತಿಳಿಸಿದರು.
ಕೋಲಾರ ವಿಭಾಗದ ಸಹಾಯಕ ಅಧೀಕ್ಷಕ ವಿ.ಆರ್.ಸ್ವಾಮಿ, ಅಂಚೆ ಉಪ ನಿರೀಕ್ಷಕ ವಿ.ವೆಂಕಟರಮಣಪ್ಪ, ಅಧಿಕಾರಿಗಳಾದ ಶ್ರೀಧರ್, ಗಿರೀಶ್, ರಾಜ್ಕುಮಾರ್, ಆಶಾಕುಮಾರ್, ನಾರಾಯಣಮೂರ್ತಿ, ರಾಮಾಂಜಿನಯ್ಯ, ವೆಂಕಟೇಶಮೂರ್ತಿ, ಭಕ್ತರಹಳ್ಳಿ ಗ್ರಾಮದ ವೆಂಕಟಮೂರ್ತಿ, ಎಚ್.ವಿ.ಮುನಿರೆಡ್ಡಿ, ಚನ್ನೇಗೌಡ, ಎಸ್.ನಾರಾಯಣಸ್ವಾಮಿ, ಎ.ಎನ್.ದೇವರಾಜ್, ಗುತ್ತಿಗೆದಾರ ಹೇಮಂತ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.