Home News ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಯಕ್ಷಗಾನದ ಪ್ರಸಂಗ

ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಯಕ್ಷಗಾನದ ಪ್ರಸಂಗ

0

ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದ ಯಕ್ಷಗಾನವನ್ನು ತಾಲ್ಲೂಕಿನ ಮಳ್ಳೂರಿನ ಹೊರವಲಯದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡದ ಕಲಾವಿದರೇ ನಡೆಸಿಕೊಟ್ಟ ‘ಶ್ವೇತ ಕುಮಾರ ಚರಿತ್ರೆ’ ಎಂಬ ಪ್ರಸಂಗವನ್ನು ಅಲ್ಲಿನ ಭಾಷಾ ಸೊಗಡು, ವೇಷ, ಕಲಾವಿದರ ನೃತ್ಯ, ಹಿಮ್ಮೇಳದ ತಾಳಮದ್ದಲೆ ಸಂಗೀತ, ಹಾಡುಗಾರಿಕೆ, ಹಾವಭಾವವನ್ನೆಲ್ಲಾ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಜನರು ನೋಡಿ ಆನಂದಿಸಿದರು.
ಸಾಯಿನಾಥ ಜ್ಞಾನ ಮಂದಿರದಲ್ಲಿರುವ ಜಲಕಂಠೇಶ್ವರಸ್ವಾಮಿಗೆ ರುದ್ರಾಭಿಷೇಕ ಮಾಡಿ, ಭಕ್ತರಿಗೆಲ್ಲಾ ಪ್ರಸಾದ ವಿನಿಯೋಗಿಸಲಾಯಿತು. ಸಾಯಿಬಾಬಾ, ಗಣಪತಿ ಮತ್ತು ಸುಬ್ರಮಣ್ಯಸ್ವಾಮಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಿವರಾತ್ರಿಯ ಜಾಗರಣೆಯ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ದೇವಾಲಯದಲ್ಲಿ ’ಶಿವರಾತ್ರಿ ಕವಿರಾತ್ರಿ’ ಎಂಬ ಕವನ ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕವಿಗಳಾದ ಈಧರೆ ಪ್ರಕಾಶ್, ದೇವರಮಳ್ಳೂರು ಚನ್ನಕೃಷ್ಣ, ದೇವರಾಜ್, ಈಶ್ವರ್ ಸಿಂಗ್ ಕವನ ವಾಚಿಸಿದರು. ವರದನಾಯಕನಹಳ್ಳಿಯ ಈಧರೆ ತಂಡದಿಂದ ಡೊಳ್ಳುಕುಣಿತ, ದೇವರಮಳ್ಳೂರು ಮಹೇಶ್ ಮತ್ತು ಪ್ರಕಾಶ್ ಅವರಿಂದ ಜನಪದ ಗಾಯನ, ಮಕ್ಕಳಿಂದ ಕೋಲಾಟವೂ ನಡೆಯಿತು. ಫಲಾಹಾರವನ್ನು ಭಕ್ತರಿಗೆಲ್ಲಾ ವಿತರಿಸಿದರು.
ಬೆಳಗಿನ ಜಾವದವರೆಗೂ ಸಂಪೂರ್ಣ ಜಾಗರಣೆ ಮಾಡಿ ಚಟುವಟಿಕೆಯಿಂದಿದ್ದ ಹತ್ತು ಜನರನ್ನು ಆಯ್ದು ದೇವಾಲಯದ ವತಿಯಿಂದ ಬಹುಮಾನ ವಿತರಿಸಿದರು.

error: Content is protected !!