ಜೂನ್ 25ನೇ ತಾರೀಕಿನಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗಾಗಿ ರಾಜ್ಯಾದ್ಯಂತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ಪ್ರಕಾಶ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಾಸ್ಕ್ ತಯಾರಿಸುತ್ತಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು ಎರಡು ಸಾವಿರದ ಆರು ನೂರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲರಿಗೂ ಉಚಿತವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಾಸ್ಕ್ ಗಳನ್ನು ವಿತರಿಸುವ ಸಲುವಾಗಿ ತಾಲ್ಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಗಳ ತಯಾರಿಕಾ ಕಾರ್ಯದಲ್ಲಿ ನಿರತರಾಗಿದ್ದಾರೆ.

“ಮಾಸ್ಕ್ ಗಳ ತಯಾರಿಕೆಗಾಗಿ ತಾಲ್ಲೂಕಿನ ಸಮಾಜ ಸೇವಕರಾದ ಆಂಜನಪ್ಪ ಪುಟ್ಟು ಅವರು ನೂರು ಮೀಟರ್ ಬಟ್ಟೆಯನ್ನು ಕೊಡಿಸಿ ಸಹಕರಿಸಿದ್ದಾರೆ. ಕೊರೊನಾ ವೈರಸ್ ತಡೆಗಟ್ಟಲು ಮಾಡುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ಕಾಗಿ ನಿಸ್ವಾರ್ಥವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಇಡೀ ಜಿಲ್ಲೆಯಲ್ಲಿ ದಾನಿಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ಸುಮಾರು ಇಪ್ಪತ್ತು ಸಾವಿರ ಮಾಸ್ಕ್ ಗಳ ತಯಾರಿಕೆಯ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ ಹನ್ನೆರಡು ಸಾವಿರದಷ್ಟು ಮಾಸ್ಕ್ ಗಳು ತಯಾರಾಗಿವೆ” ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್ ತಿಳಿಸಿದ್ದಾರೆ.