Home News ಮಕ್ಕಳ ಪ್ರತಿಭೆ ಗುರುತಿಸಲು ಕಲಾಶ್ರೀ ಶಿಬಿರ

ಮಕ್ಕಳ ಪ್ರತಿಭೆ ಗುರುತಿಸಲು ಕಲಾಶ್ರೀ ಶಿಬಿರ

0

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲಾಶ್ರೀ ಶಿಬಿರವನ್ನು ನಡೆಸಲಾಗುತ್ತಿದೆ. ಗ್ರಾಮೀಣ ಮಕ್ಕಳ ಪ್ರತಿಭೆಗಳ ವಿಕಸನಕ್ಕೆ ಶಿಬಿರ ಸಹಕಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣಿಕ ಇಲಾಖೆಯಿಂದ ಆಯೋಜಿಸಿದ್ದ 9–16 ವರ್ಷದೊಳಗಿನ ಮಕ್ಕಳಿಗೆ ತಾಲ್ಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಇದನ್ನು ಗುರುತಿಸುವ ಕೆಲಸವಾಗಬೇಕು. ಶಾಲೆಗಳಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡುವ ಅಗತ್ಯವಿದೆ. ಯಾವುದೇ ಸ್ಪರ್ಧೆಯಲ್ಲಿ ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಹಿಂಜಕೆ ಹೆಚ್ಚಿರುತ್ತದೆ. ಆದರೆ ಕ್ರಿಯಾಶೀಲತೆ ಹೆಚ್ಚಿರುತ್ತದೆ. ಆತ್ಮವಿಶ್ವಾಸದಿಂದ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹಿಂಜರಿಕೆ ಬಿಟ್ಟು ಪ್ರದರ್ಶಿಸಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ನುಡಿದರು.
ಸೃಜನಾತ್ಮಕ ಕಲೆಯಲ್ಲಿ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಸೃಜನಾತ್ಮಕ ಬರವಣಿಗೆಯಲ್ಲಿ ಕಥೆ, ಕವನ, ಪ್ರಬಂಧ, ಸುಗಮ ಸಂಗೀತ, ವಿಜ್ಞಾನದಲ್ಲಿ ನೂತನ ಆವಿಷ್ಕಾರದಲ್ಲಿ ನಡೆದ ಮಾದರಿ ಪ್ರದರ್ಶನದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಇಂದಿರಾ, ಶಿವಕುಮಾರ್‌, ಶ್ರೀನಿವಾಸ್‌, ಸುಮಿತ್ರ, ಶ್ರೀಲಕ್ಷ್ಮಿ, ಕೃಷ್ಣಮೂರ್ತಿ, ನರಸಿಂಹಪ್ಪ ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಗಿರಿಜಾಂಬಿಕೆ, ಮುಖ್ಯ ಶಿಕ್ಷಕರಾದ ಎಂ.ಶಿವಕುಮಾರ್‌, ಎನ್‌.ಕೃಷ್ಣಮೂರ್ತಿ, ಶ್ರೀನಿವಾಸ್‌, ಮುನಿನರಸಿಂಹಪ್ಪ, ಪ್ರಶಾಂತ್‌, ವಿ.ಕೃಷ್ಣ ಮತ್ತಿತರರು ಹಾಜರಿದ್ದರು.