ನಗರದ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಕಂದಾಯ ಭವನದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹಿಂದುಳಿದ ಹಾಗೂ ಶ್ರಮಜೀವಿ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ, ಜನರಲ್ಲಿ ಭಕ್ತಿಪ್ರಧಾನ ಚಿಂತನೆಗಳನ್ನು ತುಂಬಿಸಿದ ಅವರು ಮೂರು ಲಕ್ಷ ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರ ಜಯಂತಿಯನ್ನು ಎಲ್ಲೆಡೆ ಶ್ರದ್ಧೆಯಿಂದ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ‘ಮಡಿವಾಳ ಮಾಚಿದೇವ’ ಪ್ರಮುಖರು ಎಂದರು.
ಮುಖ್ಯ ಭಾಷಣಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್ ಮಾತನಾಡಿ, ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಮಾಚಿದೇವರ ಕಾಯಕ. ವೀರನಿಷ್ಠೆಯ ಶರಣನೀತ. ಶಾಸನ ಶಿಲ್ಪಗಳಲ್ಲಿಯೂ ಇವರ ಕುರಿತಾಗಿ ಮಾಹಿತಿಯಿದೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು ಎಂದು ಮಾಚಿದೇವರ ಜೀವನದ ಘಟನೆಗಳನ್ನು, ವಚನಸಾಹಿತ್ಯವನ್ನು ವಿವರಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುತ್ತಿನ ಪಲ್ಲಕ್ಕಿಗಳ ಮೆರವಣಿಗೆಯಲ್ಲಿ ಗಾರುಡಿಗೊಂಬೆಗಳು, ವೀರಗಾಸೆ, ತಮಟೆ ತಂಡ, ಕಳಶ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಲಾಯಿತು. ಮಡಿವಾಳ ಜನಾಂಗದ ಸಮುದಾಯ ಭವನಕ್ಕೆ ನಿವೇಶನ ನೀಡಬೇಕೆಂದು ಕೋರಿ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಟ್ಟೆ ಶುಚಿಮಾಡಲು ಬಳಸುವ ಬಾನೆಯಲ್ಲಿರಿಸಿದ್ದ ಎಣ್ಣೆ ಮೊಗುವೆಯೊಂದಿಗಿನ ಪಂಜನ್ನು ಉರಿಸುವ ಮೂಲಕ ಮಾಡಲಾಯಿತು.
ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಮಡಿವಾಳ ಯುವಕ ಸಂಘದ ಅಧ್ಯಕ್ಷ ಡಿ.ವಿ.ಕೃಷ್ಣಪ್ಪ, ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಎನ್.ಮುರಳೀಧರ, ಉಪನ್ಯಾಸಕ ಎಸ್.ಎಂ.ಕೃಷ್ಣಪ್ಪ, ರಾಮಚಂದ್ರಪ್ಪ, ಛಲಪತಿ, ಮುನಿಕೃಷ್ಣಪ್ಪ, ನಾಗರಾಜು, ಕೊರಿಯರ್ ರಾಜು, ವೆಂಕಟಸ್ವಾಮಿ, ದೇವರಾಜ್, ರಾಜಣ್ಣ ಹಾಜರಿದ್ದರು.